ಪಾಲಿಕೆ ವಲಯ ಕಚೇರಿ ಕಟ್ಟಡ ಲೋಕಾರ್ಪಣೆ 26ಕ್ಕೆ

_MCCMYSURU
Published on

ಶಾರದಾದೇವಿನಗರದ ವಿವೇಕಾನಂದ ರಸ್ತೆಯಲ್ಲಿ ನಿರ್ಮಾಣವಾಗಿರುವ ಮಹಾನಗರ ಪಾಲಿಕೆ ವಲಯ ಕಚೇರಿ-3ರ ಸುಸಜ್ಜಿತ ಕಟ್ಟಡ ಏ.26ರಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ.

ಶಾರದಾದೇವಿನಗರ, ಕುವೆಂಪುನಗರ, ಬೋಗಾದಿ, ರಾಮಕೃಷ್ಣನಗರ, ದಟ್ಟಗಳ್ಳಿ, ಕೆ.ಜಿ.ಕೊಪ್ಪಲು, ಸರಸ್ವತಿಪುರಂ, ನಿವೇದಿತಾನಗರ, ಟಿ.ಕೆ.ಬಡಾವಣೆ, ವಿಜಯನಗರ 3ನೇ ಹಂತದ ಸಾರ್ವಜನಿಕರ ಸೇವೆಗೆ ವಲಯ ಕಚೇರಿ ನಿರ್ಮಾಣವಾಗಿದ್ದು, ಅಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ರಹೀಂ ಖಾನ್, ಬಿ.ಸುರೇಶ್, ಶಾಸಕರಾದ ಅನಿಲ್‌ಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್ ಬೋಸ್, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಪಾಲಿಕೆ ಉಪ ಆಯುಕ್ತ ದಾಸೇಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಸಜ್ಜಿತ, ಅತ್ಯಾಧುನಿಕ ಕಟ್ಟಡ: ವಲಯ ಕಚೇರಿ-3ರ ಆಯುಕ್ತ ಸತ್ಯಮೂರ್ತಿ ಮಾತನಾಡಿ, 1.12 ಎಕರೆ ಪ್ರದೇಶದಲ್ಲಿ 166 ಚದರ ವಿಸ್ತೀರ್ಣದ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡ ಇದಾಗಿದ್ದು, ಸುಮಾರು 6.5 ಕೋಟಿ ರೂ. ವೆಚ್ಚದಲ್ಲಿ ಸುಂದರ ವಿನ್ಯಾಸದೊಂದಿಗೆ ಅತ್ಯಾಕರ್ಷವಾಗಿ ನಿರ್ಮಿಸಲಾಗಿದೆ. ಸುತ್ತಲೂ ಇರುವ ಉದ್ಯಾನವನ ಕಟ್ಟಡಕ್ಕೆ ಮತ್ತಷ್ಟು ಮೆರುಗು ತಂದಿದೆ. ವಿಶೇಷಚೇತನರಿಗೆ ರ‌್ಯಾಪ್, ಶೌಚಗೃಹ, ಸಾರ್ವಜನಿಕರ ಅನುಕೂಲಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪುಟ್ಟ ಮಕ್ಕಳ ಆರೈಕೆಗೆ ಶಿಶುಪಾಲನಾ ಕೇಂದ್ರ (ಕೂಸು ಮನೆ), ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ, ಕಡತಗಳ ಸಂರಕ್ಷಣೆಗೆ ವ್ಯವಸ್ಥಿತ ಕಪಾಟುಗಳನ್ನೊಳಗೊಂಡ ದಾಖಲಾತಿ ಕೊಠಡಿ ನಿರ್ಮಿಸಲಾಗಿದೆ ಎಂದರು.

ಕಂದಾಯ, ಆರೋಗ್ಯ, ಇಂಜಿನಿಯರಿಂಗ್, ಕಂಪ್ಯೂಟರ್ ವಿಭಾಗ ಸೇರಿದಂತೆ ಆಯಾಯ ಅಧಿಕಾರಿ, ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಕೊಠಡಿಗಳನ್ನು ನಿರ್ಮಿಸಿದ್ದು, 150 ಸಿಬ್ಬಂದಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಜತೆಗೆ 60 ಮಂದಿ ಕುಳಿತು ಸಭೆ ನಡೆಸಬಹುದಾದ ಸುಸಜ್ಜಿತ ಸಭಾಂಗಣವೂ ಇದೆ. ಸಾರ್ವಜನಿಕರು, ಹಿರಿಯ ನಾಗರಿಕರು ಮೊದಲ ಅಂತಸ್ತಿಗೆ ತೆರಳಲು ಲಿಫ್ಟ್ ವ್ಯವಸ್ಥೆ ಇದ್ದು, ಸಾರ್ವಜನಿಕರ ವಾಹನಗಳ ಪಾರ್ಕಿಂಗ್‌ಗೆ ವಿಶಾಲ ಸ್ಥಳಾವಕಾಶವನ್ನೂ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಉಪ ಆಯುಕ್ತರಾದ ಸೋಮಶೇಖರ್, ಕೆ.ಜೆ.ಸಿಂಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net