ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕಿ

chetan actor
ಚೇತನ್ ಅಹಿಂಸಾ
Published on

ತೀರ್ಥಹಳ್ಳಿ: ಸಂವಿಧಾನ ಬದ್ಧವಾಗಿ ಅಭಿವ್ಯಕ್ತಿ ಸ್ವಾತಂತ್ರೃದ ಸ್ವೀಕಾರಾರ್ಹ ವಿಚಾರಗಳ ಆಧಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಸಲುವಾಗಿ ಸತ್ಯ ಪಂಥದ ಸಿದ್ಧಾಂತದ ಆಧಾರದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಯಬೇಕಿದೆ ಎಂದು ಸಾಮಾಜಿಕ ಹೋರಾಟಗಾರ, ಚಿತ್ರನಟ ಚೇತನ್ ಅಹಿಂಸಾ ಹೇಳಿದರು.

ಪಟ್ಟಣದ ರೋಟರಿ ಸಭಾಂಗಣದಲ್ಲಿ ಸೋಮವಾರ ಸಮಾನ ಮನಸ್ಕರ ನಡುವಿನ ಸಂಪರ್ಕ ಸಭೆಯ ಸಂವಾದದಲ್ಲಿ ಮಾತನಾಡಿ, ನಮ್ಮನ್ನಾಳುವ ರಾಜಕಾರಣಿಗಳು ತಮ್ಮ ಸ್ವಪ್ರತಿಷ್ಠೆ ಮತ್ತು ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ರಾಷ್ಟ್ರದ ಹಿತಾಸಕ್ತಿ ಇಲ್ಲದಿರುವುದೇ ದುರಂತ. ಹೀಗಾಗಿ ಎಡ, ಬಲ ಮತ್ತು ಮಧ್ಯದ ಸಿದ್ಧಾಂತವನ್ನು ಹೊಂದಿರುವ ರಾಜಕೀಯ ಪಕ್ಷಗಳ ವಿರುದ್ಧ ಹೋರಾಡುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.

ಜಾತಿ, ಧರ್ಮ, ಪಂಗಡ, ಭ್ರಷ್ಟಾಚಾರ, ಹದಗೆಟ್ಟಿರುವ ಕಾನೂನು ವ್ಯವಸ್ಥೆ, ಲಿಂಗ ಅಸಮಾನತೆ, ಪ್ರಾದೇಶಿಕ ಅಸಮತೋಲನ ಮುಂತಾದ ಕಾರಣಗಳಿಂದ ನಲುಗಿ ಹೋಗಿರುವ ಸಮಾಜವನ್ನು ಬದಲಿಸಬೇಕಿದೆ. ಸಮ ಸಮಾಜದ ನಿರ್ಮಾಣದ ಸಲುವಾಗಿ ಸತ್ಯ ಪಂಥದ ಸಿದ್ಧಾಂತದ ಆಧಾರದಲ್ಲಿ ಜಾತಿ, ಧರ್ಮ, ಪಂಗಡದ ಹೊರತಾದ ರಾಜಕೀಯ ಪಕ್ಷವನ್ನು ಹುಟ್ಟುಹಾಕುವ ಅಗತ್ಯ ಇದೆ. ಮುಂಬರುವ ವಿಧಾನಸಭಾ ಚುನಾವಣೆಯ ಹೊತ್ತಿಗೆ ಸಮಾನ ಮನಸ್ಕರ ದೊಡ್ಡ ಪಡೆಯನ್ನೇ ಸಂಘಟಿಸುವ ಕಾರ್ಯ ವ್ಯಾಪಕವಾಗಿ ಆಗಬೇಕಿದೆ. ಈ ಸಂಬಂಧ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದರು.ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಕಡಿದಾಳ್ ದಯಾನಂದ್, ಕೆ.ಜಿ.ಶ್ರೀಧರ್, ಬಿ.ಗಣಪತಿ, ಕೋಡ್ಲು ವೆಂಕಟೇಶ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net