ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಸಮೀಕ್ಷೆ ಯಶಸ್ಸಿಗೆ ಸಮುದಾಯದ ಪಾತ್ರ ಮುಖ್ಯ / ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಕುರಿತಂತೆ ಮೇ ೫ ರಿಂದ ೧೭ ರವರೆಗೆ ೧೨ ದಿನಗಳ ಕಾಲ ಜಿಲ್ಲೆಯಾದ್ಯಂತ ಶಿಕ್ಷಕ ಗಣತಿದಾರರ ಮೂಲಕ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದ್ದು ಪರಿಶಿಷ್ಟ ಜಾತಿ ಸಮುದಾಯದವರು ಸ್ವಯಂ ಪ್ರೇರಿತವಾಗಿ ಮಾಹಿತಿ ಹಾಗೂ ವಿವರವನ್ನು ಗಣತಿದಾರರರಿಗೆ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ನೆಡೆದ ಪರಿಶಿಷ್ಟ ಜಾತಿಯ ಒಳಮಿಸಲಾತಿ ಸಮೀಕ್ಷೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದಿಂದ ನೇಮಕವಾಗಿರುವ ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹ ಮಾಡಿ ಶೇಖರಿಸುವ ಸಂಬAಧ ರಾಜ್ಯದಾದ್ಯಂತ ಸಮೀಕ್ಷೆ ನಡೆಸಲು ತೀರ್ಮಾನಿಸಿರುತ್ತದೆ, ಅದಂತೆ ಕೋಲಾರ ಜಿಲ್ಲೆಯಾದ್ಯಂತ ಮೇ ೦೫ ರಿಂದ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಈ ಸಮೀಕ್ಷೆಯನ್ನು ಜಿಲ್ಲೆಯಲ್ಲಿರುವ ಮತಗಟ್ಟೆಗೆ ಒಬ್ಬರಂತೆ ಗಣತಿದಾರರನ್ನು ನೇಮಕ ಮಾಡಲಾಗುತ್ತದೆ. ಈ ಗಣತಿದಾರರನ್ನಾಗಿ ಕೇವಲ ಪ್ರೌಢಶಾಲಾ ಶಿಕ್ಷಕರನ್ನು ಮಾತ್ರವೇ ನೇಮಿಸಲಾಗುತ್ತದೆ. ಆಶಾ, ಅಂಗವಾಡಿ ಕಾರ್ಯಕರ್ತೆಯರನ್ನು ಯಾವದೇ ಕಾರಣಕ್ಕೂ ನೇಮಕ ಮಾಡಲಾಗುವುದಿಲ್ಲ. ಸಮೀಕ್ಷೆಯನ್ನು ಆಂಡ್ರಾಯ್ಡ್ ಮೋಬೈಲ್ ಮೂಲಕ ನಿಗಧಿತ ಆಪ್‌ನಲ್ಲಿ ಆನ್‌ಲೈನ್‌ನಲ್ಲಿಯೇ ನಮೂದು ಮಾಡಬೇಕಾಗಿರುತ್ತದೆ. ಸರಳ ಪ್ರಶ್ನಾವಳಿ ಮೂಲಕ ಮಾಹಿತಿಯನ್ನು ಸವಿಸ್ತಾರವಾಗಿ ಸಂಗ್ರಹಿಸಬೇಕಾಗಿರುತ್ತದೆ ಎಂದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒಟ್ಟು ೨೩೬ ಗಣತಿದಾರರು, ಮುಳಬಾಗಿಲಿನಲ್ಲಿ ೨೯೦, ಕೆಜಿಎಫ್‌ನಲ್ಲಿ ೨೪೩, ಬಂಗಾರಪೇಟೆಯಲ್ಲಿ ೨೩೬, ಕೋಲಾರದಲ್ಲಿ ೪೨೧ ಹಾಗೂ ಮಾಲೂರುನಲ್ಲಿ ೨೬೫ ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು ೧೬೯೧ ಗಣತಿದಾರರನ್ನು ಮತ್ತು ೧೫೩ ಮೆಲ್ವಿಚಾರಕರನ್ನು ಆಯ್ಕೆ ಮಾಡಿದ್ದು, ಇವರಿಗೆ ಇದೇ ೨೮ ರಂದು ತಾಲ್ಲೂಕು ಮಟ್ಟದಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ನಂತರ ಪ್ರತಿಯೊಂದು ಗ್ರಾಮದಲ್ಲಿಯೂ ಮನೆ-ಮನೆಗೆ ಬಂದು ಪರಿಶಿಷ್ಟ ಜಾತಿಯ ಹಾಗೂ ಒಳ ಮೀಸಲಾತಿ ಸಮೀಕ್ಷೆಯನ್ನು ನಡೆಸಲಿದ್ದಾರೆ. ಸಮುದಾಯದವರು ಸಮೀಕ್ಷೆ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯ ಮತಗಟ್ಟೆಗಳಲ್ಲಿ ಈಗಾಗಲೆ ಬಿ.ಎಲ್.ಓ ಗಳಾಗಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಅಂತಹ ಶಿಕ್ಷಕರನ್ನು ಈ ಗಣತಿಯ ಕಾರ್ಯಕ್ಕೆ ನೇಮಕ ಮಾಡಿಕೊಳ್ಳಲಾಗುವುದು. ಯಾವ ಮತಗಟ್ಟೆಯಲ್ಲಿ ಶಿಕ್ಷಕರು ಬಿ.ಎಲ್.ಓ ಗಳಾಗಿ ಕೆಲಸ ಮಾಡುತ್ತಿಲ್ಲವೋ ಅಂತಹ ಕಡೆ ಬೇರೆ ಶಿಕ್ಷಕರನ್ನು ಗಣತಿದಾರರಾಗಿ ನೇಮಕ ಮಾಡಲಾಗುತ್ತದೆ. ಪ್ರತಿ ೧೦ ಜನ ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕ ಅಧಿಕಾರಿಯನ್ನು ನೇಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಮೀಕ್ಷೆ ಸಮಯದಲ್ಲಿ ಗ್ರಾಮ ಸಹಾಯಕ ಪಿ.ಡಿ.ಒ, ವಾಟರ್‌ಮ್ಯಾನ್‌ಗಳ ಸಲಹೆ ಪಡೆದು ಮನೆಗಳನ್ನು ಗುರುತಿಸಬೇಕು. ಸಮೀಕ್ಷೆಯನ್ನು ಸೌಜನ್ಯದಿಂದ ನಡೆಸಬೇಕು. ಯಾವುದೇ ಕಾರಣಕ್ಕೂ ಒರಟಾಗಿ ಉದಾಸೀನವಾಗಿ ಅಥವಾ ಹಂಗಿಸುವAತೆ ಸಮೀಕ್ಷೆ ನಡೆಸಬಾರದು. ಎಲ್ಲಿಯೂ ಒತ್ತಾಯ ಪೂರ್ವಕವಾಗಿ ಅಭಿಪ್ರಾಯಗಳನ್ನು ಹೇರಬಾರದು. ಎಲ್ಲಾ ಗ್ರಾಮ ಪಂಚಾಯಿತಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಮೀಕ್ಷೆಗೆ ಹೊರಡುವ ಮುನ್ನ ಸಂಪೂರ್ಣ ದತ್ತಾಂಶಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು. ಪ್ರತಿ ಗ್ರಾಮದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಜನ ಸಂಖ್ಯೆಯ ಸ್ಪಷ್ಟ ಮಾಹಿತಿ ಪಡೆದಿಟ್ಟುಕೊಳ್ಳಬೇಕು. ಪರಿಶಿಷ್ಟ ಜಾತಿಯಡಿ ೧೦೧ ಉಪಜಾತಿಗಳಿದ್ದು, ಅವುಗಳನ್ನು ಗಣತಿದಾರರು ಕರಾರುವಾಕ್ಕಾಗಿ ನಮೂದಿಸಬೇಕು. ಒಟ್ಟಾರೆ ಕುಂದಿಲ್ಲದ ಸಮೀಕ್ಷೆ ನಡೆಸಿ ಸರ್ಕಾರದ ಅಶಯವನ್ನು ಸಾಕಾರಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ.ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಹಾಗೂ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಕ ಅಧಿಕಾರಿಗಳು, ನಗರಸಭೆ ಪುರಸಭೆ ಮುಖ್ಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೮ : ಪರಿಶಿಷ್ಟ ಜಾತಿಯ ಒಳ ಮಿಸಲಾತಿ ಕುರಿತಂತೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆ. ಸಿ.ಇ.ವಿ. ಡಾ.ಪ್ರವೀಣ್ ಪಿ.ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net