

ಪತ್ನಿ ಪರ ಪುರಷನೊಂದಿಗೆ ಆನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಮನನೊಂದು ವಿಷ ಸೇವಿಸಿ ಪತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಪತ್ನಿ, ಆಕೆಯ ಸಹೋದರ ಮತ್ತು ಪ್ರಿಯಕರನಿಗೆ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಲಾ 5 ವರ್ಷಗಳ ಕಠಿಣ ಸಜೆ ಮತ್ತು 1.25 ಲಕ್ಷ ರೂ.ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದ ಮಾದೇಗೌಡರ ಮಗನಾದ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಕುಮಾರ್ ಅವರ ಪತ್ನಿ ಜ್ಯೋತಿ, ಆಕೆಯ ಪ್ರಿಯಕರ ಚಿಕ್ಕಾಟಿ ಗ್ರಾಮದ ಪ್ರಸನ್ನಕುಮಾರ, ಆಕೆಯ ಸಹೋದರ ಮಂಜುನಾಥ ಜೈಲು ಶಿಕ್ಷೆಗೊಳಗಾದವರು.
ಪತ್ನಿ ಜ್ಯೋತಿಯು ಪ್ರಸನ್ನಕುಮಾರ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದನ್ನ ಕಣ್ಣಾರೇ ಕಂಡಿದ್ದ ಪತಿ ಕುಮಾರ್ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಉಪನಿರೀಕ್ಷಕ ಯಶವಂತಕುಮಾರ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದನ್ಯಾಯಾಧೀಶೆ ಕೆ. ಭಾಗ್ಯ ಅವರು ಶಿಕ್ಷೆಯನ್ನು ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಟಿ.ಎಚ್.ಲೋಲಾಕ್ಷಿ ಅವರು ವಾದಿಸಿದರು.