

ಧಾರವಾಡ: ಬ್ಯಾಂಕ್ ನೌಕರರು ಸಾರ್ವಜನಿಕರ ಹಣಕಾಸು ವ್ಯವಹಾರಕ್ಕೆ ಬಾಧ್ಯಸ್ಥರಾಗಿರುವುದರಿಂದ ಸಮಾಜದ ಇತರೆಲ್ಲರಿಗಿಂತ ಹೆಚ್ಚಿನ ಪ್ರಾಮಾಣಿಕತೆ ತೋರಬೇಕು. ಸದಾ ಸ್ನೇಹಯುತ ಸೇವೆ ನೀಡಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಹೇಳಿದರು.
ಕೇಂದ್ರ ವಿಚಕ್ಷಣಾ ಆಯೋಗ ಮತ್ತು ಕೆನರಾ ಬ್ಯಾಂಕ್ ನಿರ್ದೇಶನದಡಿ ಬ್ಯಾಂಕ್ ಮಂಗಳವಾರ ಹಮ್ಮಿಕೊಂಡಿದ್ದ ವಿಚಕ್ಷಣಾ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತದ ಎಲ್ಲ ಹಂತಗಳಲ್ಲೂ ಪಾರದರ್ಶಕತೆ ತೋರಿಸುವ ನಿಟ್ಟಿನಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಬ್ಯಾಂಕಿನಿಂದ ವಿಚಕ್ಷಣಾ ಜಾಗೃತಿ ಸಪ್ತಾಹ ಹಮ್ಮಿಕೊಂಡಿದೆ. ಬ್ಯಾಂಕ್ ನೌಕರರು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಅಲ್ಲದೆ, ಉದ್ಭವಿಸುವ ಮೋಸ, ವಂಚನೆಗಳ ಬಗ್ಗೆಯೂ ಅರಿವು ಹೊಂದಿರಬೇಕು ಎಂದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 80 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಹೊಂದುವ ಮೂಲಕ ಈ ಭಾಗದ ಜೀವನಾಡಿಯಾಗಿದೆ. 26,000 ಕೋಟಿ ರೂ. ವಹಿವಾಟು ದಾಟಿ ಮುನ್ನಡೆದಿರುವುದು ಸಾರ್ವಜನಿಕರು ಬ್ಯಾಂಕಿನ ಮೇಲಿಟ್ಟ ವಿಶ್ವಾಸದ ಪ್ರತೀಕ ಎಂದರು. ಬ್ಯಾಂಕಿನ ಮಹಾಪ್ರಬಂಧಕ ಚಂದ್ರಶೇಖರ ಮೋರೋ, ಬಿ.ಸಿ. ರವಿಚಂದ್ರ, ಧಾರವಾಡ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣರಾಜ ಅಡಿಗ, ಇತರರಿದ್ದರು.