ವಿಜಯವಾಣಿ ಸುದ್ದಿಜಾಲ ಶ್ರೀನಿವಾಸಪುರ (ಕೋಲಾರ)
ನಗರದ ಹೊರ ವಲಯದ ಚಿಂತಾಮಣಿ ರಸ್ತೆಯ ಕಾಲೋನಿ ಕ್ರಾಸ್ ಬಳಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯದ ಸಂಕೀರ್ಣ ಹಾಗೂ ವಸತಿ ಗೃಹಗಳು ಚಿಕ್ಕದಾಗಿದ್ದು, ಕಲಾಪಗಳನ್ನು ನಡೆಸಲು ಸಾಧ್ಯವಿಲ್ಲದ ರೀತಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಕೀಲರು ಕಳೆದ ನಾಲ್ಕು ದಿನಗಳಿಂದ ಕಲಾಪಗಳನ್ನು ಭಹಿಷ್ಕರಿಸಿ ಅನಿರ್ದಿಷ್ಟ ಧರಣಿಯನ್ನು ಕೈಗೊಂಡಿದ್ದಾರೆ.
ಶ್ರೀನಿವಾಸಪುರ ಚಿಂತಾಮಣಿ ರಸ್ತೆಯ ಕಾಲೋನಿ ಬಳಿ ೫ ಎಕೆರೆ ಪ್ರದೇಶದಲ್ಲಿ ೧೫ ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ನ್ಯಾಯಾಲಯದ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹಗಳನ್ನು ನಿರ್ಮಾಣ ಮಾಡುತ್ತಿದ್ದು, ನ್ಯಾಯಾಲಯದ ಕಲಾಪಗಳನ್ನು ನಡೆಸಲು ನ್ಯಾಯಾಲಯ ಆವರಣ ಚಿಕ್ಕದಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಜಯರಾಮೇಗೌಡ ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ ಹಲವಾರು ಬಾರಿ ಮಾಹಿತಿ ನೀಡಿ ಮನವಿ ಮಾಡಿದ್ದರೂ ಸಹ ಕಾಮಗಾರಿಯನ್ನು ಮುಂದುವರೆಸುತ್ತಿದ್ದಾರೆ. ಆದ್ದರಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ತಾಲ್ಲೂಕಿಗೆ ನೂತನ ನ್ಯಾಯಾಲಯ ಸಂಕೀರ್ಣ ಮಂಜೂರಾಗಿದ್ದು, ಕಾಮಗಾರಿಯನ್ನು ನಡೆಸಲಾಗುತ್ತಿದೆ. ಹೊಸ ಕಟ್ಟಡಗಳ ನಮೂನೆ ಪ್ರಕಾರ ಬಂಗಾರಪೇಟೆ, ಮುಳಬಾಗಿಲು, ಶಿಡ್ಲಘಟ್ಟದಲ್ಲಿ ನೂತನ ನ್ಯಾಯಾಲಯ ನಿರ್ಮಾಣವಾಗುತ್ತಿದ್ದು, ಅವುಗಳು ಅಚ್ಚುಕಟ್ಟಾಗಿ ಸುಸೂತ್ರವಾಗಿ ಮಾಡಲಾಗುತ್ತಿದೆ. ಶ್ರೀನಿವಾಸಪುರದಲ್ಲಿ ನಿರ್ಮಾಣ ಮಾಡುತ್ತಿರುವ ಕಟ್ಟಡದಲ್ಲಿ ನ್ಯಾಯಾಲಯ ಸಭಾಂಗಣ ಚಿಕ್ಕದಾಗಿದ್ದು, ಕಲಾಪಗಳನ್ನು ನಡೆಸಲು ಅನಾನುಕೂಲವಾಗುತ್ತದೆ. ಆದ್ದರಿಂದ ನಮ್ಮ ಸಮಸ್ಯೆ ಬಗೆಹರಿಸುವ ತನಕ ಅನಿರ್ದಿಷ್ಟವಾದ ಮುಷ್ಕರವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಮನವಿ :
ಕೋಲಾರಕ್ಕೆ ಶನಿವಾರ ಹೈಕೋರ್ಟ್ನಿಂದ ಕೋಲಾರ ಜಿಲ್ಲಾ ಆಡಳಿತ ನ್ಯಾಯಾಧೀಶರಾದ ಮೊಹಮ್ಮದ್ ನವಾಜ್ ಆಗಮಿಸಲಿದ್ದಾರೆ. ವಕೀಲರು ಕೋಲಾರಕ್ಕೆ ತೆರಳಿ ಮನವಿಯನ್ನು ಸಲ್ಲಿಸುವುದಾಗಿ ವಕೀಲ ಸಂಘದ ಅಧ್ಯಕ್ಷ ಜಯರಾಮೇಗೌಡ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ವೆಂಕಟೇಶ್, ಅಶ್ವಥರೆಡ್ಡಿ, ನಾರಾಯಣಸ್ವಾಮಿ, ಶ್ರೀನಿವಾಸಗೌಡ, ರಾಜಗೋಪಾಲರೆಡ್ಡಿ, ಕೆ.ಸಿ.ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ವಕೀಲರು ಅನಿರ್ದಿಷ್ಟ ಪ್ರತಿಭಟನೆಯಲ್ಲಿ ಕಲಾಪಗಳನ್ನು ಭಹಿಷ್ಕರಿಸಿ ಭಾಗವಹಿಸಿದ್ದಾರೆ.
ಚಿತ್ರ ೧೫ ಕೆ.ಎಲ್.ಆರ್. ೦೪ : ಶ್ರೀನಿವಾಸಪುರ ಚಿಂತಾಮಣಿ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡ
ಚಿತ್ರ ೧೫ ಕೆ.ಎಲ್.ಆರ್. ೦೪ಎ : ಶ್ರೀನಿವಾಸಪುರ ನ್ಯಾಯಾಲಯದ ಆವರಣದಲ್ಲಿ ಅನಿರ್ದಿಷ್ಟವಾಗಿ ಮುಷ್ಕರ ನಡೆಸುತ್ತಿರುವ ವಕೀಲರು