ನಿರಾಶ್ರಿತರ ಮೇಲೂ ರಷ್ಯಾ ಬಾಂಬ್!; ಅವಶೇಷದಡಿ 400 ಮಂದಿ ಸಿಲುಕಿರುವ ಶಂಕೆ

Ukraine
ರಕ್ಷಣಾ ಕಾರ್ಯಾಚರಣೆಯಲ್ಲಿ ಯೂಕ್ರೇನ್​ ಸೈನಿಕರು
Published on

ಕಿಯೆವ್/ಮಾಸ್ಕೊ: ಮಾರಿಯೊಪೋಲ್ ನಗರದ ಶಾಲೆಯೊಂದರೆ ಮೇಲೆ ರಷ್ಯಾ ಬಾಂಬ್ ದಾಳಿ ನಡೆಸಿದೆ ಎಂದು ಯೂಕ್ರೇನ್ ಹೇಳಿದೆ. ಈ ಶಾಲೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ ಆಶ್ರಯ ಪಡೆದಿದ್ದ ಸುಮಾರು 400 ಜನರು ಅವಶೇಷದಡಿ ಸಿಲುಕಿದ್ದಾರೆ. ಅವರ ಸ್ಥಿತಿ ಏನಾಗಿದೆಯೋ ತಿಳಿಯದು. ಪರಿಹಾರ ಕಾರ್ಯವೂ ಕಷ್ಟವಾಗಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ.

ರಷ್ಯಾದ ದಾಳಿಯಿಂದ ಈವರೆಗೆ ನಗರದಲ್ಲಿ 2,300 ಮಂದಿ ಸಾವನ್ನಪ್ಪಿದ್ದಾರೆ. ಶವಗಳನ್ನು ಸಾಮೂಹಿಕವಾಗಿ ಹೂಳಲಾಗುತ್ತಿದೆ. ಬದುಕಿರುವ ಜನರಿಗೆ ನೀರು ಸೇರಿ ಅಗತ್ಯ ಸೇವೆಗಳ ಪೂರೈಕೆಗೆ ಅಡಚಣೆ ಆಗಿದೆ. ಆಹಾರ ಕೂಡ ಸಿಗುತ್ತಿಲ್ಲ. ಸಂವಹನ ಮಾರ್ಗಗಳು ಸ್ಥಗಿತಗೊಂಡಿವೆ. ನಗರದಲ್ಲಿ ಈಗ ಬೀದಿ ಕಾಳಗಗಳು ಶುರುವಾಗಿದೆ. ಸಂಘರ್ಷ ಪೀಡಿತ ಈ ನಗರದಲ್ಲಿ ನಾಲ್ಕು ಲಕ್ಷ ಜನರು ಇದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಒಂದು ಸಾವಿರ ಮಂದಿ ಆಶ್ರಯ ಪಡೆದಿದ್ದ ಇಲ್ಲಿನ ಥಿಯೆಟರ್ ಮೇಲೆ ಬುಧವಾರ ಶೆಲ್ ದಾಳಿ ನಡೆಸಿತ್ತು. ರೇವು ಪಟ್ಟಣವಾದ ಮಾರಿಯೊಪೋಲ್ ಉಕ್ಕು ಘಟಕ ಅಜೋವಾಸ್ಟಲ್ ದಾಳಿಗೆ ಗುರಿಯಾಗಿದ್ದು, ತೀವ್ರ ಹಾನಿಗೊಂಡಿದೆ. ಯುರೋಪ್​ನಲ್ಲೇ ದೊಡ್ಡ ಉಕ್ಕು ಘಟಕವಾದ ಇದನ್ನು ಈಗ ಮುಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ರಷ್ಯಾದ ಆಕ್ರಮಣ ಶುರುವಾಗಿ 25 ದಿನಗಳಾಗಿದ್ದು, ಯೂಕ್ರೇನ್​ನ ಮೂಲಸೌಕರ್ಯಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಇದರಿಂದ ಕೋಟ್ಯಂತರ ಯುರೋ ನಷ್ಟವಾಗುವುದರ ಜತೆಗೆ ಪರಿಸರದ ಹಾನಿ ಕೂಡ ಅಗಾಧವಾಗಿದೆ ಎಂದು ಸಂಸದೆ ಲೆಸಿಯಾ ವಾಸಿಲೆಂಕೊ ಟ್ವೀಟ್ ಮಾಡಿದ್ದಾರೆ.

ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ: ಯೂಕ್ರೇನ್ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಹೈಪರ್​ಸಾನಿಕ್ ಕ್ಷಿಪಣಿ ಪ್ರಯೋಗವನ್ನು ರಷ್ಯಾ ಮುಂದುವರಿಸಿದೆ. ಡೆಲಿಯಾಟಿನ್​ನಲ್ಲಿದ್ದ ಶಸ್ತ್ರಾಗಾರವನ್ನು ಶುಕ್ರವಾರ ಸೂಪರ್​ಸಾನಿಕ್ ಕ್ಷಿಪಣಿ ಧ್ವಂಸ ಮಾಡಿದ ಬೆನ್ನಿಗೆ ಮೈಕೋಲೈವ್​ನ ಇಂಧನ ಸಂಗ್ರಹಾಗಾರವನ್ನು ‘ಕಿಂಜಲ್’ ಹೈಪರ್​ಸಾನಿಕ್ ದೂರಗಾಮಿ ಕ್ಷಿಪಣಿಯ ನಾಶ ಮಾಡಿದೆ. ಇದೇ ನಗರದ ಸೇನಾ ಬ್ಯಾರಕ್​ಗಳ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಿಂದ ಶನಿವಾರ ಕನಿಷ್ಠ 50 ಯೋಧರು ಸಾವನ್ನಪ್ಪಿದ್ದರು. ಹೈಪರ್​ಸಾನಿಕ್ ಕ್ಷಿಪಣಿಯನ್ನು ಕ್ಯಾಸ್ಪಿಯನ್ ಸಮುದ್ರದಲ್ಲಿದ್ದ ಯುದ್ಧ ನೌಕೆಯಿಂದ ಹಾರಿಸಿ, ಕೋಸ್ಟಿಯಾಂಟಿನಿವ್ಕಾ ಬಳಿ ತೈಲಾಗಾರವನ್ನು ಧ್ವಂಸ ಮಾಡಲಾಯಿತು. ಇನ್ನೊಂದು ‘ಕಾಲಿಬ್ರ’ ಕ್ರೂಸ್ ಕ್ಷಿಪಣಿಯನ್ನು ಕಪು್ಪ ಸಮುದ್ರದಿಂದ ಹಾರಿಸಿ, ರ್ಚೆನಿಹಿವ್ ಪ್ರದೇಶದ ನಿಜಿನ್​ನಲ್ಲಿರುವ ಶಸ್ತ್ರ ದುರಸ್ತಿ ಘಟಕವನ್ನು ನಿರ್ನಾಮ ಮಾಡಲಾಯಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ. ಉತ್ತರ ಭಾಗದ ಝೈಟೊಮಿರ್ ಪ್ರದೇಶದ ಓವು›ಚ್​ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಯೂಕ್ರೇನ್ ವಿಶೇಷ ಪಡೆ ಮತ್ತು ಅವರ ನೆರವಿಗೆ ಬಂದ ವಿದೇಶಿ ಹೋರಾಟಗಾರರ ಮೂಲಸೌಕರ್ಯಗಳನ್ನು ನಾಶ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.

ಅಣ್ವಸ್ತ್ರ ಕವಾಯತು?: ಯುದ್ಧದಿಂದ ಉದ್ವಿಗ್ನತೆ ಹೆಚ್ಚಿರುವ ಕಾರಣ ಪರಮಾಣು ಯುದ್ಧದ ಕವಾಯತು ನಡೆಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೂಚಿಸಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿವೆ. ಪುತಿನ್​ರ ಈ ಆದೇಶವು ಕ್ರೆಮ್ಲಿನ್ (ಅಧ್ಯಕ್ಷರ ನಿವಾಸ) ಅಧಿಕಾರಿಗಳನ್ನು ಆಶ್ಚರ್ಯಚಿಕಿತರನ್ನಾಗಿ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚಳಗೇರಿಗೆ ಇಂದು ನವೀನ್ ಮೃತದೇಹ: ಯೂಕ್ರೇನ್​ನ ಯುದ್ಧಪೀಡಿತ ಪ್ರದೇಶದಲ್ಲಿ ಶೆಲ್ ದಾಳಿಗೆ ಬಲಿಯಾದ ಎಂಬಿಬಿಎಸ್ ವಿದ್ಯಾರ್ಥಿ ನವೀನ ಗ್ಯಾನಗೌಡರ ಮೃತದೇಹ ಮಾ. 21ರಂದು ಹುಟ್ಟೂರಾದ ಹಾವೇರಿ ತಾಲೂಕಿನ ಚಳಗೇರಿ ಗ್ರಾಮಕ್ಕೆ ಬರಲಿದೆ. ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಳಗೇರಿ ಗ್ರಾಮಕ್ಕೆ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ. ವಿವಿಧ ಮಠಾಧೀಶರು, ಗಣ್ಯರು ಭಾಗಿಯಾಗಲಿದ್ದಾರೆ. ದಾವಣಗೆರೆ ಎಸ್​ಎಸ್ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ನವೀನ್ ತಂದೆ ಶೇಖರಗೌಡ ‘ವಿಜಯವಾಣಿ’ಗೆ ತಿಳಿಸಿದರು.

ಸೈಬಿರಿಯಾಕ್ಕೆ ತೆರಳಿದ ಪುತಿನ್ ಕುಟುಂಬ: ಯೂಕ್ರೇನ್-ರಷ್ಯಾ ಸಂಘರ್ಷ ಆರಂಭವಾದ ಮೇಲೆ ಪುತಿನ್ ತಮ್ಮ ಕುಟುಂಬವನ್ನು ಸೈಬಿರಿಯಾಕ್ಕೆ ಕಳುಹಿಸಿದ್ದಾರೆ. ತೆಹ್ ಅಲ್ಟಾಯ್ ಗಿರಿಶ್ರೇಣಿಯ ಅಜ್ಞಾತ ಸ್ಥಳದಲ್ಲಿನ ಸುಸಜ್ಜಿತ ಸೌಕರ್ಯವುಳ್ಳ ನೆಲಮಾಳಿಗೆಯಲ್ಲಿ ಅವರ ಕುಟುಂಬದ ಸದಸ್ಯರು ಇದ್ದಾರೆ ಎನ್ನಲಾಗಿದೆ.

ಪುತಿನ್ ಪರ ಸಿರಿಯಾ ಸೇನೆ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಪರವಾಗಿ ಹೋರಾಡಲು ಸಿದ್ಧವೆಂದು ಹೇಳಿರುವ ಸಿರಿಯಾದ ಅರೆಸೇನಾಪಡೆಯ ಯೋಧರು, ರಷ್ಯಾದಿಂದ ಸೂಚನೆಯನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ನಗರ ಪ್ರದೇಶದ ಹೋರಾಟದಲ್ಲಿ ನಿಪುಣರಾದ ಪಡೆ ನಮ್ಮಲ್ಲಿದೆ. ಇದನ್ನು ಯೂಕ್ರೋನ್​ಗೆ ಕಳುಹಿಸಲು ಸಿದ್ಧ ಎಂದು ಸಿರಿಯಾದ ಎನ್​ಡಿಎಫ್​ನ ಕಮಾಂಡರ್ ನಬಿಲ್ ಅಬ್ದುಲ್ಲಾ ತಿಳಿಸಿದ್ದಾರೆ. ಯೂಕ್ರೇನ್ ಸಂಘರ್ಷದಲ್ಲಿ ಅನ್ಯ ದೇಶದ ಸೇನೆ ಬಳಕೆಗೆ ಪುತಿನ್ ಒಪ್ಪಿಗೆ ನೀಡಿಲ್ಲ. ಆದರೆ, ಮಧ್ಯಪ್ರಾಚ್ಯದಿಂದ 16 ಸಾವಿರ ಸ್ವಯಂಸೇವಕರ ನಿಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆ.

  • ಸಂಘರ್ಷ ಪೀಡಿತ ಯೂಕ್ರೇನ್​ನಿಂದ ಒಂದು ಕೋಟಿ ಜನರು ವಲಸೆ ಹೋಗಿದ್ದಾರೆ. ಸುಮಾರು ಒಂದು ಸಾವಿರ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಪುತಿನ್ ಹತ್ಯೆಗೆ ರಷ್ಯಾದಲ್ಲೇ ಸಂಚು?: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹತ್ಯೆಗೆ ಅವರ ದೇಶದಲ್ಲೇ ಸಂಚು ನಡೆದಿದೆ ಎಂದು ಯೂಕ್ರೇನ್ ಬೇಹುಗಾರಿಕಾ ದಳ ಹೇಳಿದೆ. ಪುತಿನ್​ರನ್ನು ವಿರೋಧಿಸುವ ಪ್ರಭಾವಿ ಜನರ ಗುಂಪು, ಅವರಿಗೆ ವಿಷವುಣಿಸಲು ಸಂಚು ಮಾಡಿದೆ. ಈ ಗುಂಪಿನಲ್ಲಿ ಉದ್ದಿಮೆದಾರರು, ರಾಜಕೀಯ ನಾಯಕರು ಇದ್ದಾರೆ. ದೇಶದ ಶಾಂತಿ ಮತ್ತು ಆರ್ಥಿಕತೆಯನ್ನು ನಾಶ ಮಾಡಿರುವ ಪುತಿನ್​ರನ್ನು ಅಧಿಕಾರದಿಂದ ಕೆಳಗಿಳಿಸುವುದು ಈ ಗುಂಪಿನ ಉದ್ದೇಶವಾಗಿದೆ. ಇದನ್ನು ಮಾಡಲು ಇರುವ ಮಾರ್ಗ ಅವರನ್ನೇ ಸಂಹರಿಸುವುದಾಗಿದೆ ಎಂದು ಗುಂಪು ನಿರ್ಧರಿಸಿದೆ ಎಂದು ಗೂಢಾಚಾರರು ಮಾಹಿತಿ ನೀಡಿದ್ದಾರೆ ಎಂದು ಯೂಕ್ರೇನ್​ನ ರಕ್ಷಣಾ ಸಚಿವಾಲಯದ ಗುಪ್ತಚರ ನಿರ್ದೇಶನಾಲಯ ತಿಳಿಸಿದೆ.

ಸ್ಲೋವಾಕಿಯಾ ತಲುಪಿದ ಏರ್ ಡೆಫೆನ್ಸ್ ಸಿಸ್ಟಂ: ಅಮೆರಿಕ ಪೂರೈಸುತ್ತಿರುವ ‘ಪೆಟ್ರಿಯಾಟ್’ ಏರ್ ಡಿಫೆನ್ಸ್ ಸಿಸ್ಟಂ ಸ್ಲೋವಾಕಿಯಾ ತಲುಪಿದ್ದು, ಅಲ್ಲಿಂದ ಯೂಕ್ರೇನ್ ಸೇರಲಿದೆ. ಜರ್ಮನಿ ಮತ್ತು ನೆದರ್ಲೆಂಡ್ಸ್​ಗಳು ಶಸ್ತ್ರ ತುಕಡಿಗಳನ್ನು ಕಳುಹಿಸಲು ಒಪ್ಪಿದ್ದು, ‘ಪೆಟ್ರಿಯಾಟ್’ ಜತೆಗೆ ಅವುಗಳನ್ನು ಯೂಕ್ರೇನ್ ಗಡಿಗೆ ಕಳುಹಿಸಲಾಗುವುದು ಎಂದು ಸ್ಲೋವಾಕಿಯಾದ ರಕ್ಷಣಾ ಸಚಿವ ಜರೋಸ್ಲಾವ್ ನಾಡ್ ಹೇಳಿದ್ದಾರೆ.

ಶಾಂತಿಯುತ ನಗರ ಮಾರಿಯೊಪೋಲ್ ಮೇಲೆ ಆಕ್ರಮಣಕಾರರು ಮುಗಿಬಿದ್ದಿದ್ದಾರೆ. ಈ ಭಯಾನಕ ಯುದ್ಧಾಪರಾಧಗಳ ಕರಾಳತೆ ಶತಮಾನದವರೆಗೆ ಮಾಸುವುದಿಲ್ಲ. ಶಾಂತಿ ನೆಲಸಬೇಕಿರುವ ಕಾರಣ ರಷ್ಯಾ ಅಧ್ಯಕ್ಷರ ಜತೆ ನೇರವಾಗಿ ಮಾತುಕತೆ ನಡೆಸಲು ಈಗಲೂ ಸಿದ್ಧ. ಈ ಮಾತುಕತೆ ಅಸಾಧ್ಯವಾದರೆ 3ನೇ ವಿಶ್ವ ಯುದ್ಧ ಎದುರಾಗುತ್ತದೆ. | ವೊಲೊದಿಮಿರ್ ಝೆಲೆನ್​ಸ್ಕಿ ಯೂಕ್ರೇನ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net