ನೆಲಕಚ್ಚಿದ 15ಕ್ಕೂ ಹೆಚ್ಚು ಮನೆಗೋಡೆ

27 TKE rain
ಪಿರಮೇನಹಳ್ಳಿ ಸಮೀಪದ ಕಟ್ಟೇಹೊಳೆ ಹಳ್ಳ ತುಂಬಿ ಹರಿಯುತ್ತಿರುವುದು.
Published on

ತರೀಕೆರೆ: ತಾಲೂಕಿನೆಲ್ಲೆಡೆ ಶುಕ್ರವಾರ ರಾತ್ರಿ ಇಡೀ ಧಾರಾಕಾರ ಮಳೆಯಾಗಿದೆ. ಶುಕ್ರವಾರದಿಂದ ಶನಿವಾರ ಬೆಳಗ್ಗೆ 8ರವರೆಗೆ 24 ಗಂಟೆ ಅವಧಿಯಲ್ಲಿ ಲಕ್ಕವಳ್ಳಿಯಲ್ಲಿ 94 ಮಿ.ಮೀ, ರಂಗೇನಹಳ್ಳಿಯಲ್ಲಿ 98.6 ಮಿ.ಮೀ, ಹುಣಸಘಟ್ಟ 90 ಮಿ.ಮೀ, ಲಿಂಗದಹಳ್ಳಿ 80 ಮಿ.ಮೀ, ತ್ಯಾಗದಬಾಗಿ 68.5 ಮಿ.ಮೀ, ತಣಿಗೇಬೈಲು 95 ಮಿ.ಮೀ, ಉಡೇವಾ 40.6 ಮಿ.ಮೀ ಹಾಗೂ ತರೀಕೆರೆ ಪಟ್ಟಣದಲ್ಲಿ ಅತ್ಯಧಿಕ 107.4 ಮಿ.ಮೀ. ಮಳೆ ಸುರಿದಿದೆ.
ಕುಂಭದ್ರೋಣ ಮಳೆಗೆ ಕುಡ್ಲೂರು, ಪುಂಡನಹಳ್ಳಿ, ಕೆ.ಚಟ್ನಳ್ಳಿ, ಕೋರನಹಳ್ಳಿ, ಸ್ಟೇಷನ್ ದುಗ್ಲಾಪುರ, ಮುಂಡ್ರೆ, ಯಲುಗೆರೆ, ಹರುವನಹಳ್ಳಿ, ಸೀತಾಪುರ ಕಾವಲು, ಲಕ್ಕವಳ್ಳಿ, ವಿಠ್ಠಲಾಪುರ, ನಾಗೇನಹಳ್ಳಿ, ಪಟ್ಟಣದ ಕೋಡಿ ಕ್ಯಾಂಪ್, ಲಿಂಗದಹಳ್ಳಿ, ಕರಕುಚ್ಚಿ ಇತರ ಕಡೆಗಳಲ್ಲಿ 15ಕ್ಕೂ ಹೆಚ್ಚು ಮನೆಗೋಡೆ ನೆಲಸಮವಾಗಿವೆ.
ಪಟ್ಟಣದ ಕೋಡಿಕ್ಯಾಂಪ್‌ನಿಂದ ಲಿಂಗದಹಳ್ಳಿ ರಸ್ತೆ ಸೇರಿ ತಾಲೂಕಿನ ಅಲ್ಲಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿರುವುದು ಮಾತ್ರವಲ್ಲ, ವಿದ್ಯುತ್ ಕಂಬಗಳ ಜತೆ ಮರಗಳನ್ನು ಬುಡ ಸಮೇತ ಧರೆಗುರುಳಿಸಿದೆ. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಾತ್ರಿಯಿಡೀ ಧಾರಾಕಾರ ಮಳೆಗೆ ಜಂಬದಹಳ್ಳ, ಪಟ್ಟಣದ ದೊಡ್ಡಕೆರೆ, ಪಿರಮೇನಹಳ್ಳಿ ಸಮೀಪದ ಕಟ್ಟೇಹೊಳೆ ಹಳ್ಳ ಭರ್ತಿಯಾಗಿ ಕೋಡಿ ಬಿದ್ದಿದೆ. ಶಾಸಕ ಜಿ.ಎಚ್.ಶ್ರೀನಿವಾಸ್, ಎಸಿ ಡಾ. ಕೆ.ಜೆ.ಕಾಂತರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್ ಮತ್ತಿತರ ಅಧಿಕಾರಿಗಳು ನೆರೆ ಹಾವಳಿ ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net