ನಗರೋತ್ಥಾನ ಕಾಮಗಾರಿಗಳ ಪೂರ್ಣಕ್ಕೆ ಮೂರು ತಿಂಗಳ ಗಡುವು / ಅಧಿಕಾರಿಗಳಿ ಇಚ್ಛಾಶಕ್ತಿ ಇಲ್ಲದೇ ಹೋದರೆ ವರ್ಗಾವಣೆ ಮಾಡಿಕೊಂಡು ಹೋಗಿ / ಬೇರೆಯವರನ್ನು ತರುವುದು ನಮಗೆ ಗೊತ್ತಿದೆ / ಶಾಸಕ ಕೊತ್ತೂರು ಮಂಜುನಾಥ್ ಕಡಕ್ ಎಚ್ಚರಿಕೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ನಗರಸಭೆ ವ್ಯಾಪ್ತಿಯ ೩೫ ವಾರ್ಡ್ಗಳಲ್ಲಿ ನಗರೋತ್ಥಾನ ಯೋಜನೆಯ ಮೂಲಕ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು. ನೀವೇ ಹೇಳಿದ ಸಮಯಕ್ಕೆ ಪೂರ್ಣವಾಗಿಲ್ಲದೇ ಹೋದರೆ ಪರಿಣಾಮ ಬೇರೆ ರೀತಿಯಲ್ಲಿ ಇರುತ್ತದೆ ಎಂದು ಗುತ್ತಿಗೆದಾರರಿಗೆ ಶಾಸಕ ಕೊತ್ತೂರು ಜಿ ಮಂಜುನಾಥ್ ಗಡುವು ನೀಡಿದರು.

ಸೋಮವಾರ ನಗರಸಭೆಯ ಸಭಾಂಗಣದಲ್ಲಿ ನಗರಸಭೆಗೆ ಸಂಬAಧಿಸಿದ ಕುಂದುಕೊರತೆಗಳ ಹಾಗೂ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿಗೆ ಹಣದ ಕೊರತೆಯಿಲ್ಲ, ಕಾಮಗಾರಿಗಳು ಆಗದೆ ಸಮಸ್ಯೆ ತಂದಾಗ ಅಭಿವೃದ್ಧಿ ಹೇಗೆ ಸಾಧ್ಯ, ನಗರಸಭೆ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಪ್ರತಿನಿತ್ಯ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರ ಜೊತೆಗೆ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಬೇಕು. ಕೇವಲ ಕಛೇರಿಗೆ ಮಾತ್ರ ಸೀಮಿತವಾಗಬಾರದು, ಗುತ್ತಿಗೆದಾರನಿಗೆ ವಹಿಸಿದ್ದೇವೆ, ಅವರೇ ನೋಡಿಕೊಳ್ಳತ್ತಾರೆ, ಅಂತ ಕೂತರೆ ಜನರಿಂದ ವೋಟ್ ಹಾಕಿಸಿಕೊಂಡ ತಪ್ಪಿಗೆ ಜನಪ್ರತಿನಿಧಿಗಳಿಂದ ಬೈಸಿಕೊಳ್ಳಬೇಕಾಗುತ್ತದೆ. ಜನರಿಗೋಸ್ಕರ ಇದ್ದೇವೆ ಎಂಬುದನ್ನು ಅರ್ಥಮಾಡಿಕೊಂಡು ಕೆಲಸ ಮಾಡಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಾವು ಎಲ್ಲರೂ ನಗರದ ಅಭಿವೃದ್ಧಿಗೆ ಮೊದಲ ಅಧ್ಯತೆ ನೀಡಬೇಕು. ಇದಕ್ಕೆ ಗುತ್ತಿಗೆದಾರರು ಸಂಬAಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರ ಅಭಿಪ್ರಾಯವನ್ನು ಪಡೆಯಬೇಕು. ನಗರಸಭೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಒಂದು ಕಾಮಗಾರಿ ಪೂರ್ಣಗೊಂಡ ನಂತರ ಮತ್ತೊಂದು ಕಾಮಗಾರಿ ಪ್ರಾರಂಭ ಮಾಡಬೇಕು. ಅದು ಬಿಟ್ಟು ಪ್ರಾರಂಭ ಮಾಡಿ ಮಧ್ಯದಲ್ಲೇ ಬಿಟ್ಟರೆ ಸುಮ್ಮನೆ ಬಿಡಲ್ಲ, ಎಲ್ಲಾ ಕಾಮಗಾರಿಗಳನ್ನು ಮಾಡಕ್ಕೆ ಹೋಗಿ ಸಾರ್ವಜನಿಕರ ಗುರಿಗೆ ತುತ್ತಾಗಬೇಡಿ, ಅನುದಾನಕ್ಕೆ ಕೊರತೆಯಿಲ್ಲ ಆದರೆ ಕಾಮಗಾರಿಗಳು ಪೂರ್ಣಗೊಳ್ಳದೇ ಅನುದಾನ ಕೊಡಲು ಸಾಧ್ಯವಿಲ್ಲ ಎಂದರು.

ಅಧಿಕಾರಿಗಳಿಗೆ ಇಂತಿಷ್ಟು ಅಂತ ಕೆಲಸದ ಸಮಯವಿದೆ, ಆದರೆ ಜನಪ್ರತಿನಿಧಿಗಳಿಗೆ ದಿನದ ೨೪ ಗಂಟೆಯೂ ಕೂಡ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ರಾತ್ರಿ ಮಲಗಿದ್ದರೂ ಜನ ಬಿಡಲ್ಲ, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ಇಲ್ಲದೇ ಹೋದರೆ ವರ್ಗಾವಣೆ ಮಾಡಿಕೊಂಡು ಹೋಗಿ ನಿಮ್ಮ ಜಾಗಕ್ಕೆ ಕೆಲಸ ಮಾಡೋರನ್ನು ಕರೆಸಿಕೊಳ್ಳುವುದು ನಮಗೆ ಗೊತ್ತಿದೆ. ನಗರದಾದ್ಯಂತ ಬೀದಿ ದೀಪಗಳಿಗೆ ಸಂಬAಧಿಸಿದAತೆ ಸರ್ವೆ ಮಾಡಿಸಿ, ಎಷ್ಟು ಅವಶ್ಯಕತೆ ಇದೆ ಎಂಬುದನ್ನು ಕೂಡಲೇ ಗಮನಕ್ಕೆ ತನ್ನಿ, ಜೊತೆಗೆ ಪ್ರತಿ ತಿಂಗಳು ಸಮಸ್ಯೆಗಳಿಗೆ ಸಂಬAಧಿಸಿದAತೆಯೇ ಕೊನೆಯ ವಾರ ಸಭೆ ನಡೆಯಲಿದ್ದು, ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ತಿಳಿಸಿದರು.

ಸದಸ್ಯ ಪ್ರಸಾದ್ ಬಾಬು ಮಾತನಾಡಿ, ಗುತ್ತಿಗೆದಾರನಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ವಿನಾಕಾರಣ ನಗರಸಭೆ ಸದಸ್ಯರ ಮೇಲೆ ಸುಳ್ಳು ಆರೋಪಗಳನ್ನು ಮಾಡಲು ಹೊರಟಿದ್ದಾರೆ. ಪ್ರಶ್ನೆ ಮಾಡಿದರೆ ನಾವು ಲೋಕಲ್ ಅಂತಾರೆ, ಲೋಕಲ್ ಆದರೆ ರಾಜಕೀಯ ಮಾಡಲಿ ಟೆಂಡರ್ ಯಾಕೆ ಬೇಕು, ಇವರನ್ನು ಮೊದಲು ಬ್ಲಾಕ್ ಲಿಸ್ಟ್ ಗೆ ಹಾಕಲಿ ಉಳಿದವರಿಗೂ ಇದು ಪಾಠವಾಗುತ್ತದೆ. ನಗರೋತ್ಥಾನ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆಯಾಗಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳು ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ :
ಸದಸ್ಯರಾದ ರಾಕೇಶ್, ಸೂರಿ, ಮುರಳಿಗೌಡ ಮಾತನಾಡಿ, ನಗರಸಭೆ ಅಧಿಕಾರಿಗಳಿಗೆ ನಾವು ಜನರಿಂದ ಆಯ್ಕೆಯಾದ ಸದಸ್ಯರು ಅಂತ ಪರಿಗಣಿಸುತ್ತಾ ಇಲ್ಲ, ಕನಿಷ್ಠ ಸಮಸ್ಯೆ ಹೇಳಿದಾಗ ಪರಿಹಾರಕ್ಕೆ ಸಹ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ನಗರೋತ್ಥಾನ, ಯರಗೋಳು ಕಾಮಗಾರಿಗಳಿಗೆ ವೇಗ ನೀಡಬೇಕು, ಕಾಮಗಾರಿ ಗುಣಮಟ್ಟವನ್ನು ಕಾಪಾಡಬೇಕು, ಕ್ಯೂರಿಂಗ್ ಸರಿಯಾಗಿ ಆಗಬೇಕು, ಯುಜಿಡಿಯ ಅನಾವಶ್ಯಕವಾಗಿ ತೋಡಿದ ಗುಂಡಿಗಳನ್ನು ಕೂಡಲೇ ಮುಚ್ಚಬೇಕು ಒತ್ತಾಯಿಸಿದರು.

ಸಭೆಯಲ್ಲಿ ನಗರಸಭೆ ಆಯುಕ್ತ ಶಿವಾನಂದ್, ಯೋಜನಾ ನಿರ್ದೇಶಕಿ ಅಂಬಿಕಾ, ಇಂಜಿನಿಯರ್ ಶ್ರೀನಿವಾಸ್, ಸೇರಿದಂತೆ ಗುತ್ತಿಗೆದಾರರು ನಗರಸಭೆ ಸದಸ್ಯರು ಇದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೪ : ನಗರಸಭೆಯ ಸಭಾಂಗಣದಲ್ಲಿ ನಗರಸಭೆಗೆ ಸಂಬAಧಿಸಿದ ಕುಂದುಕೊರತೆಗಳ ಹಾಗೂ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಕೊತ್ತೂರು ಜಿ ಮಂಜುನಾಥ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವುದು. ನಗರಸಭೆ ಆಯುಕ್ತ ಶಿವಾನಂದ್, ಯೋಜನಾ ನಿರ್ದೇಶಕಿ ಅಂಬಿಕಾ ಮತ್ತಿರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net