ನಗರಾಭಿವೃದ್ಧಿಗೆ 50 ಕೋಟಿ ರೂ.ಕೋರಿ ಸಚಿವರಿಗೆ ಪತ್ರ

CTD MLA PUPPI----01
Published on

ಚಿತ್ರದುರ್ಗ: ನಗರಾಭಿವೃದ್ಧಿಗೆ 50 ಕೋಟಿ ರೂ.ಅನುದಾನ ಕೋರಿ ಪೌರಾಡಳಿತ ಸಚಿವ ರಹೀಂಖಾನ್ ಅವರಿಗೆ ಪತ್ರ ಬರೆದಿರುವುದಾಗಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.

ನಗರಸಭೆಯಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಪೌರಾಡಳಿತ ಸಚಿವರು ನಗರದ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುತ್ತಿದ್ದಾರೆ. 15ನೇ ಹಣಕಾಸು ಹಾಗೂ ಸ್ವಚ್ಛ ಭಾರತ್‌ಮಿಷನ್ ಯೋಜನೆಯಡಿ ಕಸ ವಿಲೇವಾರಿಗೆ 95.50 ಲಕ್ಷ ರೂ.ವೆಚ್ಚದಲ್ಲಿ 9 ವಾಹನಗಳನ್ನು ಮಂಜೂರು ಮಾಡಿದ್ದಾರೆ. ಇವುಗಳೊಂದಿಗೆ ಇನ್ನು 12 ವಾಹನಗಳನ್ನು ಕೊಡುವುದಾಗಿ ತಿಳಿಸಿದ್ದಾರೆ ಎಂದರು.

ಕ್ಷೇತ್ರಾಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಮಂಜೂರು ಮಾಡಿದ್ದ 25 ಕೋಟಿ ರೂ. ಅನುದಾನದಲ್ಲಿ 7.19 ಕೋಟಿ ರೂ.ಗಳನ್ನು ನಗರದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ತಾರತಮ್ಯವಿಲ್ಲದೆ ಪ್ರತಿ ವಾರ್ಡ್‌ಗೂ 30.95 ಲಕ್ಷ ರೂ.ಅನುದಾನ ಒದಗಿಸಲಾಗಿದೆ. ಸಿಸಿ ರಸ್ತೆ, ಒಳಚರಂಡಿ, ಹೈಮಾಸ್ಟ್ ದೀಪ, ಉದ್ಯಾನ ಸಹಿತ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. 26 ಪರಿಶಿಷ್ಟ ಜಾತಿ ಹಾಗೂ 10 ಪರಿಶಿಷ್ಟ ವರ್ಗದ ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಜ್ಯಹಣಕಾಸು ಆಯೋಗ ಹಾಗೂ ನಗರಸಭೆ ಅನುದಾನದಲ್ಲಿ ಲ್ಯಾಪ್‌ಟಾಪ್ ವಿತರಿಸಲಾಗಿದೆ ಎಂದು ತಿಳಿಸಿದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ನೀಡಿರುವ ಹಕ್ಕುಪತ್ರಗಳಿಗೆ ನಗರಸಭೆ ಇ-ಸ್ವತ್ತು ನೀಡಿದೆ. ಫಲಾನುಭವಿಗಳ ಮನೆಗೆ ಇ-ಸ್ವತ್ತು ತಲುಪಿಸಲಾಗುವುದು. ನಗರದಲ್ಲಿ 1001 ವಸತಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅರ್ಹರಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು. 57 ಲಕ್ಷ ರೂ. ವೆಚ್ಚದಲ್ಲಿ ಬಾಲಕಿಯರ ಸರ್ಕಾರಿ ಜ್ಯೂನಿಯರ್ ಕಾಲೇಜು ಹಿಂಭಾಗದ ರಸ್ತೆ, ನಗರಸಭೆ ಕ್ರಾಸ್‌ನಿಂದ ರಂಗಯ್ಯನ ಬಾಗಿಲು ಹತ್ತಿರದ ಗಣೇಶ ದೇವಸ್ಥಾನದ ಮುಂಭಾಗದವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.

ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ ರಾಘವೇಂದ್ರ, ಉಪಾಧ್ಯಕ್ಷೆ ಜಿ.ಎಸ್. ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ, ಮೊಹಮ್ಮದ್‌ಜೈಲ್ಲಾದ್ದೀನ್, ಗೊಪ್ಪೆ ಮಂಜುನಾಥ್, ಹರೀಶ್, ಶಶಿಕುಮಾರ್, ದೀಪು, ಸೊಪ್ಪು ಸುರೇಶ್, ವೆಂಕಟೇಶ್,ನಾಗರತ್ನಮ್ಮ ಮತ್ತಿತರ ಸದಸ್ಯರು, ಪೌರಾಯುಕ್ತೆ ಎಂ. ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net