ವಿಜಯವಾಣಿ ಸುದ್ದಿಜಾಲ ಕೋಲಾರ
ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಸರ್ವಜ್ಞ ಪಾರ್ಕ್ ಬಳಿ ನಗರಸಭೆ ಅನುದಾನದಿಂದ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗಿದೆ ಎಂದು ಕೋಲಾರ ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ರಮೇಶ್ ತಿಳಿಸಿದರು.
ನಗರಸಭೆಯ ಸ್ವಂತ ನಿಧಿ ೧೩.೫೦ ಲಕ್ಷ ಹಾಗೂ ೧೫ನೇ ಹಣಕಾಸು ಆಯೋಗದ ಅನುದಾನ ೨೦.೩೧ ಲಕ್ಷ ಸೇರಿ ಒಟ್ಟು ೩೩.೮೧ ಲಕ್ಷ ವೆಚ್ಚದಲ್ಲಿ ಫುಡ್ ಕೋರ್ಟ್ ನಿರ್ಮಿಸಲಾಗಿದೆ ಎಂದು ಶನಿವಾರ ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷಾ ನಗರಸಭೆ ಆಡಳಿತಾಧಿಕಾರಿಯಾಗಿದ್ದಾಗ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಮುತುವರ್ಜಿಯಿಂದ ಫುಡ್ ಕೋರ್ಟ್ ನಿರ್ಮಾಣ ಆರಂಭವಾಯಿತು. ನಾವು ಅಧಿಕಾರಕ್ಕೆ ಬಂದ ಮೇಲೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದೆವು. ಈಗ ನಿರ್ಮಾಣ ಪೂರ್ಣಗೊಂಡಿದ್ದು, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಶುಕ್ರವಾರ ಉದ್ಘಾಟಿಸಿದ್ದಾರೆ ಎಂದರು.
ಎರಡು ಹಂತಗಳಲ್ಲಿ ಕಾಮಗಾರಿ ನಡೆದಿದೆ. ಮೊದಲ ಹಂತದಲ್ಲಿ ನಗರಸಭೆಯ ಸ್ವಂತ ಅನುದಾನವಾದ ೧೩.೫೦ ಲಕ್ಷದಲ್ಲಿ ಫುಡ್ ಕೋರ್ಟ್ಗೆ ಫುಟ್‌ಪಾತ್ ನಿರ್ಮಿಸುವ ಕೆಲಸ ನಡೆದಿದೆ. ಇನ್ನು ೨೦೨೪-೨೫ನೇ ಸಾಲಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ೧೫ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನ ೩೩.೮೧ ಲಕ್ಷಗಳಲ್ಲಿ ಫುಡ್ ಕೋರ್ಟ್ನ ಶೆಲ್ಟರ್ ನಿರ್ಮಿಸಲಾಗಿದೆ. ನಗರಸಭೆ ಸಾಮಾನ್ಯ ಸಭೆಯದಲ್ಲಿ ತೀರ್ಮಾನದಂತೆ ಕೆಲಸ ನಡೆದಿದೆ. ಫುಡ್ ಕೋರ್ಟ್ ನಿರ್ಮಾಣಕ್ಕೆ ಸಿಎಸ್‌ಆರ್ ನಿಧಿ ಸೇರಿದಂತೆ ಬೇರೆ ಯಾವುದೇ ಅನುದಾನ ಬಳಸಿಕೊಂಡಿಲ್ಲ ಎಂದು ಹೇಳಿದರು.
ಆ ಭಾಗದ ಬೀದಿ ಬದಿಯಲ್ಲಿ ಹಲವಾರು ಮಂದಿ ಬೀದಿ ಬದಿ ತಿನಿಸು ಅಂಗಡಿ ಇಟ್ಟುಕೊಂಡಿದ್ದರು. ಅವರಿಗೆ ಫುಡ್ ಕೋರ್ಟ್ನಲ್ಲಿ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದೇವೆ. ಅದರಂತೆ ಅವರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ಅವರ ಪಟ್ಟಿ ನಮ್ಮ ಬಳಿ ಇದೆ. ನಗರಸಭೆ ಸಮಿತಿ ಸಭೆಯಲ್ಲಿ ಚರ್ಚಿಸಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಪೌರಾಯುಕ್ತರ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುತ್ತೇವೆ. ಫುಡ್ ಕೋರ್ಟ್ನಲ್ಲಿ ೨೭ ಕೌಂಟರ್‌ಗಳಿದ್ದು, ತಿನಿಸು ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈ ಭಾಗದಲ್ಲಿ ಶಾಖಾಹಾರಕ್ಕೆ ಮಾತ್ರ ಅನುಮತಿ ನೀಡಲಾಗುವುದು. ಮಾಂಸಾಹಾರ ತಿನಿಸುಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬಾಕ್ಸ್
ಫುಡ್‌ಕೋರ್ಟ್ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಮತ್ತು ಶಾಸಕ ಕೊತ್ತೂರು ಮಂಜುನಾಥ್ ಪ್ರಾರಂಭೋತ್ಸವಕ್ಕೆ ಹೋದ ಸಂದರ್ಭದಲ್ಲಿ ಕಾಂಗ್ರೇಸ್‌ನಲ್ಲಿಯೇ ೨ ಗುಂಪುಗಳ ಮಧ್ಯೆ ಜಟಾಪಟಿ ನಡೆದಿತ್ತು. ಶಾಸಕ ಕೊತ್ತೂರು ಮಂಜುನಾಥ್ ನಗರಸಭೆ ಮತ್ತು ಸರ್ಕಾರದ ಹಣ ಹಾಗೂ ಸಿ.ಎಸ್.ಆರ್. ಹಣದಿಂದ ಫುಡ್‌ಕೋರ್ಟ್ ನಿರ್ಮಾಣವಾಗಿದೆ ಎಂದಾಗ ಕಾಂಗ್ರೇಸ್‌ನ ಮತ್ತೊಂದು ಗುಂಪು ಡಿ.ಸಿ.ಪಿ.ದೇವರಾಜ್ ರವರ ಮುತುವರ್ಜಿಯಿಂದ ಹಾಗೂ ಹಿಂದಿನ ಜಿಲ್ಲಾಧಿಕಾರಿಯವರು ನೀಡಿದ ಸಿ.ಎಸ್.ಆರ್. ಹಣದಲ್ಲಿ ನಿರ್ಮಾಣಗೊಳ್ಳಲಾಗಿದೆ ಎಂದಾಗ ೨ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಚಿತ್ರ ೧೬ ಕೆ.ಎಲ್.ಆರ್. ೦೪ : ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ರಮೇಶ್ ರವರ ಭಾವಚಿತ್ರ