ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ನಗರದಲ್ಲಿ ಕಿರಿದಾದ ರಸ್ತೆಗಳು ಇರುವುದರಿಂದ ವಾಹನಗಳ ಸಂಚಾರ ದಟ್ಟಣೆ ಇತ್ತೀಚೆಗೆ ಹೆಚ್ಚಾಗಿ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಪ್ರತಿದಿನ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ಇಲಾಖೆಗಳಿಗೆ ಹೋಗುವ ಅನೇಕರಿಗೆ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಸುತ್ತಮುತ್ತಲಿನ ನಾಯಿಕೊಡೆಗಳಂತೆ ತಲೆ ಎತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ನಗರದಿಂದ ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳ, ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರನ್ನು ಕರೆದೊಯ್ಯುವ ವಿವಿಧ ಕಂಪನಿಗಳಿಗೆ ಸೇರಿದ ಬಸ್ಸುಗಳ ಸಂಚಾರದ ಜೊತೆಗೆ ಸಾರ್ವಜನಿಕರ ಸಂಚಾರವೂ ಸೇರಿ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ನಗರದ ಪ್ರಮುಖ ವೃತ್ತಗಳಲ್ಲಿ ಮಾತ್ರ ಪೋಲಿಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆ ವೃತ್ತಗಳಲ್ಲಿ ಸಂಚಾರಿ ಪೋಲಿಸ್ ಇರುತ್ತದೆ. ಉಳಿದಂತೆ ಇತರೆ ರಸ್ತೆಗಳಲ್ಲಿ ವಾಹನಗಳ ಸಂಚಾರದ ದಟ್ಟಣೆಯ ನಡುವೆ ಶಾಲಾ ಕಾಲೇಜುಗಳ ಬಸ್ಸುಗಳು ಮತ್ತು ಖಾಸಗಿ ಕಂಪನಿಗಳ ಬಸ್ಸುಗಳು ಡ್ರಾಪ್ ಅಂಡ್ ಪಿಕ್‌ಅಪ್ ಪಾಯಿಂಟ್‌ಗಳ ಬಳಿ ರಸ್ತೆಯಲ್ಲಿಯೇ ಬಸ್ಸುಗಳನ್ನು ನಿಲ್ಲಿಸಿಕೊಳ್ಳುತ್ತಿರುವುದರಿಂದ ಹಿಂಭಾಗ ಮತ್ತು ಮುಂಭಾಗ ಬರುವ ವಾಹನಗಳು ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದ ಆಗಾಗ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ.
ಕೋಲಾರ ನಗರದಿಂದ ಟೇಕಲ್ ರಸ್ತೆಯ ಮೂಲಕ ಹಾದು ಹೋಗುವ ರಸ್ತೆ ಅಗಲೀಕರಣ ಕಡಿಮೆ ಇದ್ದು, ಈ ರಸ್ತೆಯ ಮೂಲಕ ಶಾಲಾ ಕಾಲೇಜಿಗಳಿಗೆ ಹೋಗುವ ಬಸ್ಸುಗಳು ಮತ್ತು ನರಸಾಪುರ ಕೈಗಾರಿಕಾ ಪ್ರಾಂಗಣಕ್ಕೆ ಹೋಗುವ ಬಸ್ಸುಗಳು ಇದೇ ರಸ್ತೆಯ ಮೂಲಕ ಹೋಗುತ್ತಿರುವುದರಿಂದ ಪಿಕ್‌ಅಪ್ ಮತ್ತು ಡ್ರಾಪ್ ಪಾಯಿಂಟುಗಳು ಹೆಚ್ಚಾಗಿದ್ದು, ರಸ್ತೆಯಲ್ಲಿಯೇ ನಿಲ್ಲಿಸಿ ಡ್ರಾಪ್ ಅಂಡ್ ಪಿಕ್‌ಅಪ್ ಮಾಡುತ್ತಿದ್ದಾರೆ.
ಬಂಗಾರಪೇಟೆ ರಸ್ತೆ, ಮುಳಬಾಗಿಲು ರಸ್ತೆ, ಶ್ರೀನಿವಾಸಪುರ ರಸ್ತೆ ಈ ಮಾರ್ಗವಾಗಿ ಹೋಗುವ ರಸ್ತೆಗಳಲ್ಲಿ ಇದೇ ರೀತಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಫುಟ್‌ಬಾತ್ ಇಲ್ಲದೇ ಇರುವುದರಿಂದ ವಾಹನಗಳು ರಸ್ತೆಗಳಲ್ಲಿಯೇ ನಿಲ್ಲಿಸಿಕೊಳ್ಳುತ್ತಿದ್ದಾರೆ. ಇದರಿಂದ ಪ್ರತಿದಿನ ರಸ್ತೆಗಳಲ್ಲಿ ಸಂಚರಿಸುವವರಿಗೆ ಕಿರಿಕಿರಿ ಉಂಟಾಗುತ್ತಿದೆ.
ಕೋಟ್
ಸಂಚಾರಿ ಪೋಲಿಸ್ ವೃತ್ತಗಳನ್ನು ಬಿಟ್ಟು ಇತರೆ ರಸ್ತೆಗಳಲ್ಲಿ ಸಂಚಾರ ಮಾಡಬೇಕು. ಆಗ ವಾಹನ ಸವಾರರಿಗೂ ಭಯ ಹುಟ್ಟುತ್ತದೆ. ಇತ್ತೀಚೆಗೆ ಖಾಸಗಿ ಶಾಲಾ ಕಾಲೇಜುಗಳ ಬಸ್ಸುಗಳು ಮತ್ತು ಕಾರ್ಖಾನೆ ಬಸ್ಸುಗಳ ಓಡಾಟ ನಗರದಲ್ಲಿ ಹೆಚ್ಚಾಗಿದೆ. ನಡು ರಸ್ತೆಗಳಲ್ಲಿ ಬಸ್ಸುಗಳನ್ನು ನಿಲ್ಲಿಸಿ ಮಕ್ಕಳನ್ನು ಮತ್ತು ಕಾರ್ಮಿಕರನ್ನು ಹತ್ತಿಸಿಕೊಳ್ಳುವ ಕೆಲಸ ಮಾಡುತ್ತಿರುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದೆ. ಬೆಳ್ಳಗ್ಗಿನ ಜಾವ ಮತ್ತು ಸಂಜೆಯ ಸಮಯದಲ್ಲಿ ನಗರದಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಕಂಡುಬರುತ್ತದೆ. ನಗರದಲ್ಲಿ ಸಂಚಾರಿ ಪೋಲಿಸರು ಹೆಚ್ಚು ಗಸ್ತು ತಿರುಗುವ ಕೆಲಸ ಮಾಡಬೇಕು. ಆಗ ಸಮಸ್ಯೆ ನಿಬಾಯಿಸಲು ಸಾಧ್ಯವಾಗುತ್ತದೆ.
-ಅಣ್ಣಿಹಳ್ಳಿ ನಾಗರಾಜ್, ಕೋಲಾರನಗರದ ನಿವಾಸಿ.
ಕೋಟ್
ನಗರದಲ್ಲಿ ಏಕಮುಖ ರಸ್ತೆಗಳನ್ನು ಮಾಡಿದ್ದರೂ ಅದು ಪ್ರಯೋಜನಕ್ಕೆ ಬರದಂತೆ ಆಗಿದೆ. ನಗರದ ಕೆಲವು ವೃತ್ತಗಳಲ್ಲಿ ಪೋಲಿಸರೇ ಇರುವುದಿಲ್ಲ. ಸಾರ್ವಜನಿಕರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಿರುತ್ತಾರೆ. ಏಕಮುಖ ರಸ್ತೆಗಳನ್ನು ಮಾಡಿ ಒಂದು ವಾಹನಗಳನ್ನು ನಿಲ್ಲಿಸುವುದರಿಂದ ಅರ್ಧ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಆವರಿಸಿಕೊಳ್ಳುತ್ತಿದೆ. ಉಳಿದ ರಸ್ತೆಯಲ್ಲಿ ದ್ವಿಚಕ್ರವಾಹನಗಳು ಮತ್ತು ಸಾರ್ವಜನಿಕರು ಓಡಾಡಲು ಇರುವ ರಸ್ತೆಯಲ್ಲಿಯೇ ವಾಹನಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದರಿಂದ ನಗರದ ರಸ್ತೆಗಳು ಟ್ರಾಫಿಕ್ ಜಾಮ್ ಆಗುತ್ತಿವೆ.
-ಮುನಿವೆಂಕಟೇಶ್, ಹಿರಿಯ ನಾಗರೀಕರು.
ಕೋಟ್
ನಗರದಲ್ಲಿ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಶಾಲಾ ಕಾಲೇಜುಗಳ ಸಮಯ ಮತ್ತು ಇಲಾಖೆಗಳ ಸಮಯದಲ್ಲಿ ಸ್ವಲ್ಪ ಟ್ರಾಫಿಕ್ ಜಾಮ್ ಇರುತ್ತದೆ. ಶಾಲಾ ಕಾಲೇಜು ಮತ್ತು ಕಂಪನಿ ಬಸ್ಸುಗಳು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಡ್ರಾಪ್ ಅಂಡ್ ಫಿಕ್‌ಅಪ್ ಮಾಡಿಸುವ ಕೆಲಸ ಮಾಡಲಾಗುವುದು.
-ಎಂ.ಜಿ.ಲೋಕೇಶ್, ಟ್ರಾಫಿಕ್ ವೃತ್ತ ನಿರೀಕ್ಷಕರು, ಕೋಲಾರ.
ಚಿತ್ರ ೨೬ ಕೆ.ಎಲ್.ಆರ್. ೦೨ : ನಗರದ ಟೇಕಲ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿರುವುದು