

ಹುಣಸೂರು: ನಗರ ವ್ಯಾಪ್ತಿಯ ಟೀ ಸ್ಟಾಲ್‌ಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡಿರುವ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಕೋಟ್ಪಾ-2023 ಸಮನ್ವಯ ಸಮಿತಿಯಲ್ಲಿ ನಿರ್ಧರಿಸಲಾಯಿತು.
ತಾಲೂಕು ಆಡಳಿತ, ಆರೋಗ್ಯಾಧಿಕಾರಿಗಳ ಕಚೇರಿ, ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಸೋಮವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಈ ಕುರಿತು ಮಾತನಾಡಿದ ಉಪತಹಸೀಲ್ದಾರ್ ನರಸಿಂಹಯ್ಯ, ಕಳೆದ ಸಾಲಿನಲ್ಲಿ ಟೀ ಸ್ಟಾಲ್‌ಗಳಲ್ಲಿ ಬೀಡಿ, ಸಿಗರೇಟುಗಳ ಚಿಲ್ಲರೆ ಮಾರಾಟ ಮತ್ತು ಅವುಗಳ ಬಳಕೆಗೆ ಅವಕಾಶ ನೀಡಿದ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಗಿದೆ. ಹೀಗಿದ್ದೂ ಇಂತಹ ಪ್ರಕರಣಗಳು ಅದೇ ಅಂಗಡಿಗಳಲ್ಲಿ ಕಂಡುಬರುತ್ತಿವೆ. ಪದೇ ಪದೆ ಕಾನೂನು ಉಲ್ಲಂಘಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸುವುದು ಸೂಕ್ತವಾದುದಾಗಿದೆ. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಮಾತನಾಡಿ, 2022ನೇ ಸಾಲಿನಲ್ಲಿ ಸಮಿತಿಯು ತಾಲೂಕಿನಲ್ಲಿ ದಿಢೀರ್ ದಾಳಿ ನಡೆಸಿದ್ದು, 289 ಪ್ರಕರಣಗಳನ್ನು ದಾಖಲಿಸಿ ಒಟ್ಟು 33,600 ರೂ.ಗಳ ದಂಡಶುಲ್ಕವನ್ನು ವಸೂಲು ಮಾಡಲಾಗಿದೆ. ಈ ಸಾಲಿನಲ್ಲಿ ಈವರೆಗೆ 101 ಪ್ರಕರಣಗಳನ್ನು ದಾಖಲಿಸಿ 12 ಸಾವಿರ ರೂ.ಗಳ ದಂಡಶುಲ್ಕ ವಸೂಲು ಮಾಡಿದೆ. ಮಾತ್ರವಲ್ಲದೆ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಅರಿವು ಕಾರ್ಯಕ್ರಮ, ಜಾಥಾಗಳನ್ನು ಆಯೋಜಿಸಿದೆ ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ವೆಂಕಟೇಶ್, ಸಿಡಿಪಿಒ ರಶ್ಮಿ, ನಗರಸಭೆಯ ಅಧಿಕಾರಿ ಶಿವಕುಮಾರ್, ನಗರಠಾಣೆ ಪಿಎಸ್‌ಐ ಶ್ರೀಧರ್, ಶಿಕ್ಷಣ ಸಂಯೋಜಕ ರುದ್ರಪ್ಪ ಹಾಜರಿದ್ದರು.
ದಿಢೀರ್ ದಾಳಿ: ತಾಲೂಕಿನ ಬಿಳಿಕೆರೆ ಹೋಬಳಿ ಕೇಂದ್ರದಲ್ಲಿ ಅಧಿಕಾರಿಗಳ ತಂಡ ತಂಬಾಕು ಮಾರಾಟದ ಅಂಗಡಿಗಳ ಮೇಲೆ ಇದೇ ಸಂದರ್ಭದಲ್ಲಿ ದಿಢೀರ್ ದಾಳಿ ನಡೆಸಿ 6 ಸಾವಿರ ರೂ.ಗೂ ಹೆಚ್ಚು ದಂಡ ವಸೂಲಿ ಮಾಡಿತು.