ಧಾರವಾಡ, ಕಲಬುರಗಿ ಪೀಠಗಳಲ್ಲೂ ಪಿಐಎಲ್ ಸಲ್ಲಿಕೆ: ಹೈಕೋರ್ಟ್ ತೀರ್ಮಾನ

highcourt
Published on

ಬೆಂಗಳೂರು: ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.

ಸಂಚಾರಿ ಪೀಠಗಳು ಕಾಯಂ ಪೀಠಗಳಾದ ಬಳಿಕ ಎರಡೂ ಪೀಠಗಳಲ್ಲಿ ಪಿಐಎಲ್ ಸಲ್ಲಿಕೆಗೆ ಅವಕಾಶ ನೀಡುವ ಬೇಡಿಕೆ ಇತ್ತು. ಆದರೆ, ನ್ಯಾಯಮೂರ್ತಿಗಳ ಕೊರತೆ ಮತ್ತಿತರ ಆಡಳಿತಾತ್ಮಕ ಕಾರಣಗಳಿಂದಾಗಿ ಎರಡೂ ಕಡೆ ಪಿಐಎಲ್ ಸಲ್ಲಿಕೆಗೆ ಅನುಮತಿ ನೀಡಿರಲಿಲ್ಲ.

ಈಗ ಆ.1ರಿಂದ ಅನ್ವಯವಾಗುವಂತೆ ಆ ಎರಡೂ ಪೀಠಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿನ ವಿಚಾರಗಳಲ್ಲಿ ಅಯಾ ಪೀಠಗಳಲ್ಲಿ ಪಿಐಎಲ್ ದಾಖಲಿಸಬಹುದಾಗಿದೆ. ಆದರೆ, ಆ ಪಿಐಎಲ್‌ಗಳನ್ನು ಬೆಂಗಳೂರು ಪ್ರಧಾನ ಪೀಠದಲ್ಲಿರುವ ವಿಭಾಗೀಯ ಪೀಠ ವಿಡಿಯೋ ಕಾನ್ಫರೆನ್ಸ್ (ಹೈಬ್ರಿಡ್ ) ಮಾದರಿಯಲ್ಲಿ ವಿಚಾರಣೆ ನಡೆಸಲಿದೆ.

ಈ ಕುರಿತಂತೆ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ 2008ರ ಜೂ.10ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮಾರ್ಪಡಿಸಲಾಗಿದ್ದು, ಇನ್ನುಮುಂದೆ ಆ. 1ರಿಂದ ಅನ್ವಯವಾಗುವಂತೆ ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳ ವ್ಯಾಪ್ತಿಯ ಜಿಲ್ಲೆಗಳ ವಿಷಯಗಳನ್ನು ಆಯಾ ಪೀಠಗಳ ಮುಂದೆಯೇ ಪಿಐಎಲ್ ಸಲ್ಲಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದೇ ವಿಚಾರದ ಕುರಿತು ಕಲಬುರಗಿಯ ಶರಣ್‌ಪಾಟೀಲ್ ಪಿಐಎಲ್ ಸಲ್ಲಿಸಿದ್ದರು, ಅದರ ವಿಚಾರಣೆ ಸೋಮವಾರ ಹೈಕೋರ್ಟ್‌ನಲ್ಲಿ ಬಂದಾಗ ಅರ್ಜಿದಾರರೇ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿ, ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ತಮ್ಮ ಅರ್ಜಿ ಊರ್ಜಿತವಾಗುವುದಿಲ್ಲ, ವಿಲೇವಾರಿ ಮಾಡಬೇಕೆಂದು ಕೋರಿದರು. ಆ ಕೋರಿಕೆಯನ್ನು ನ್ಯಾಯಾಲಯ ಮಾನ್ಯ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net