

ರಿಪ್ಪನ್‌ಪೇಟೆ: ಸಾಮಾಜಿಕ ಸ್ವಾಸ್ಥೃ ಕಾಪಾಡುವಂತಹ ಧಾರ್ಮಿಕ ಕ್ಷೇತ್ರಗಳ ಮೇಲಿನ ದಾಳಿ ಖಂಡನೀಯ ಎಂದು ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
ಗರ್ತಿಕೆರೆಯಲ್ಲಿ ಅಮೃತ ಮತ್ತು ಹುಂಚದಕಟ್ಟೆ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಮಂಗಳವಾರ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರ ಪರವಾಗಿ ಗ್ರಾಪಂ ಎದುರು ಹಮ್ಮಿಕೊಳ್ಳಲಾಗಿದ್ದ ಜನಾಗ್ರಹ ಸಭೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ಮಠ, ಮಂದಿರ, ಧಾರ್ಮಿಕ ಕ್ಷೇತ್ರಗಳ ಮೇಲೆ ಅಪಚಾರವೆಸಗುವ ಹುನ್ನಾರ ನಡೆಯುತ್ತಿದೆ. ವೀರೇಂದ್ರ ಹೆಗ್ಗಡೆ ಅವರು ಸಮಾಜದ ಉನ್ನತಿ ಕಾರ್ಯ ಮಾಡುತ್ತ ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆದರೆ ಕೆಲವರಿಂದ ಕಳಂಕ ಹೊರಿಸುವ ಪ್ರಯತ್ನ ನಡೆಯುತ್ತಿದೆ. ಧರ್ಮಕ್ಕೆ ಚ್ಯುತಿ ಬಂದಾಗ ಆತಂಕಗೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ಪ್ರತಿಭಟಿಸಬೇಕು. ತನಿಖೆಯಿಂದ ಎಲ್ಲ ಷಡ್ಯಂತ್ರಗಳು ಬಯಲಾಗಲಿವೆ ಎಂದರು.
ಶ್ರೀ ಮಠದ ಸಭಾಭವನದಿಂದ ಗ್ರಾಪಂವರೆಗೆ ಗ್ರಾಮಸ್ಥರು ಮೆರವಣಿಗೆ ನಡೆಸಿದರು. ಕ್ಷೇತ್ರದ ಘನತೆ ಹಾಳು ಮಾಡಲು ಹವಣಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಉಪತಹಸೀಲ್ದಾರ್ ಮೋಹನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ಸಚಿನ್ ಗೌಡ, ಬಿ.ಎಸ್.ಪುರುಷೋತ್ತಮ, ಬಂಡಿ ರಾಮಚಂದ್ರ, ವಾಸಪ್ಪ ಗೌಡ, ರಾಘವೇಂದ್ರ, ಗಣೇಶ, ರಾಜು, ವಿಶ್ವನಾಥ ಇತರರಿದ್ದರು.