

ಮೂಡಿಗೆರೆ: ಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗುತ್ತಿರುವ ಭಕ್ತಾದಿಗಳಿಗೆ ಬಣಕಲ್ ಹೋಬಳಿ ಬಿಜೆಪಿ ಯುವ ಮೋರ್ಚಾದಿಂದ ಪಾನಕ, ಮಜ್ಜಿಗೆ, ಹಣ್ಣು ವಿತರಿಸಲಾಯಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೂರದ ಊರಿನಿಂದ ಪುರುಷರು, ಮಹಿಳೆಯರು ಮತ್ತು ಮಕ್ಕಳು ನೂರಾರು ಕಿ.ಮೀ. ಪಾದಯಾತ್ರೆ ಮೂಲಕ ಸಾಗುತ್ತಾರೆ. ಆಯಾಸವಾದಾಗ ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ದಾರಿಯುದ್ದಕ್ಕೂ ನೀರು, ಪಾನಕ, ಹಣ್ಣು, ಊಟ, ಚಿಕಿತ್ಸೆ ಮತ್ತು ವಿಶ್ರಾಂತಿಗೆ ವ್ಯವಸ್ಥೆ ಮಾಡಿಕೊಟ್ಟರೆ ದೇವರು ಅಂಥ ದಾನಿಗಳ ರಕ್ಷಣೆಗೆ ನಿಲ್ಲಲಿದ್ದಾನೆ. ಪ್ರತಿ ವರ್ಷ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಶಿವರಾತ್ರಿ ಪೂಜೆಗೆಂದು ಪಾದಯಾತ್ರೆ ಮೂಲಕ ಸಾಗುವುದು ನೋಡುತ್ತಿದ್ದೇವೆ. ಪಾದಯಾತ್ರಿಗಳಿಗೆ ರಕ್ಷಣೆ ನೀಡುವ ಜತೆಗೆ ಅವರಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಪ್ರತಿ ಗ್ರಾಪಂನಿಂದ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಸವಿಲೇವಾರಿ ವಾಹನವನ್ನು ಅಲ್ಲಲ್ಲಿ ನಿಲ್ಲಿಸಿ ಸ್ವಚ್ಛತೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ವಿಶ್ರಾಂತಿ ಪಡೆಯಲು ರಸ್ತೆಯುದ್ಧಕ್ಕೂ ಸರ್ಕಾರಿ ಕಟ್ಟಡ, ಶಾಲೆ ಕಾಲೇಜು ಕಟ್ಟಡಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಂ.ಗಜೇಂದ್ರ, ಹೋಬಳಿ ಬಿಜೆಪಿ ಅಧ್ಯಕ್ಷ ಕೂಡಳ್ಳಿ ಯತೀಶ್, ಬಿಜೆಪಿ ಮುಖಂಡರಾದ ವಿಕ್ರಂ, ಪರೀಕ್ಷಿತ್ ಜಾವಳಿ, ಅವಿನಾಶ್, ಅರುಣ್ ಬಿನ್ನಡಿ, ಸಾಗರ್, ಸಂಜಯ್ ಕೊಟ್ಟಿಗೆಹಾರ, ರಮೇಶ್ ಗೌಡ, ಯುವ ಮೋರ್ಚಾ ಅಧ್ಯಕ್ಷ ಅತೀಥ್ ಹೆಸಗೋಡು ಇತರರಿದ್ದರು.