ಧರ್ಮ, ಸಂಸ್ಕೃತಿ, ದಾಸೋಹ ಉಳಿಯಲು ಮಠಗಳು ಕಾರಣ

bsy
Published on

ಕಾಯಕ ದಾಸೋಹದೊಂದಿಗೆ ಋಷಿ ಮುನಿಗಳು ತೋರಿದ ಸಾಧನೆಯ ಹಾದಿಯಲ್ಲಿ ನಮ್ಮ ಪರಂಪರೆ ನಡೆಯಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲೂಕಿನ ಜಯಪುರ ಹೋಬಳಿಯ ಬರಡನಪುರ ಗ್ರಾಮದಲ್ಲಿ ಶ್ರೀ ಮಹಾಂತೇಶ್ವರ ಮಠದ ವತಿಯಿಂದ ಭಾನುವಾರ ಆಯೋಜಿಸಿದ್ದ ಪಟ್ಸ್ಥಲ ಬ್ರಹ್ಮೋಪದೇಶ ಪೂರ್ವಕ ಪಟ್ಟಾಧಿಕಾರ ಮಹೋತ್ಸವ ಮತ್ತು ಶ್ರೀ ಮಹಾಂತೇಶ್ವರ ಮಂಗಳ ಮಂಟಪ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಧರ್ಮ, ಸಂಸ್ಕೃತಿ, ದಾಸೋಹ ಉಳಿಯಲು ಮಠ ಮಾನ್ಯಗಳು ಕಾರಣವಾಗಿವೆ. ಸಾರ್ಥಕ ಬದುಕಿಗೆ ಧರ್ಮವೇ ಅಡಿಗಲ್ಲಾಗಿದೆ. ಧರ್ಮವೆಂದರೆ ಕೇವಲ ಆಚರಣೆ ಅಥವಾ ಪಂಥವಲ್ಲ, ಸತ್ಯದ ದಾರಿಯಲ್ಲಿ ಮಾನವ ಜೀವನ ಹಿಡಿದಿಡುವ ವೌಲ್ಯಗಳಾಗಿವೆ ಎಂದರು.

ಒಳ್ಳೆಯದನ್ನು ಮಾತ್ರ ನಿರೀಕ್ಷಿಸುವುದು ಸರಿಯಲ್ಲ. ಒಳಿತು ಕೆಡಕುಗಳ ಮಿಶ್ರಣವೇ ಜೀವನ. ನಮ್ಮ ಅಧ್ಯಾತ್ಮ ಪರಂಪರೆ ಶ್ರದ್ಧಾಕೇಂದ್ರಗಳು, ಗುರು ಅನುಗ್ರಹಗಳಿಂದ ಜೀವನದ ಕೆಡುಕುಗಳ ತೀವ್ರತೆಯನ್ನು ಶಮನಗೊಳಿಸಿಕೊಳ್ಳಬೇಕು ಎಂದರು.

ಪರತತ್ವದ ಅರಿವಿನ ಜತೆಗೆ ಧರ್ಮದ ಜೀವನ ಸಾರ್ಥಕತೆ ತಂದು ಕೊಡಲಿದೆ. ಮಾನವನ ಆಂತರಿಕ ಶಾಂತಿ, ನೆಮ್ಮದಿ ಕಾಪಾಡಲು ಧರ್ಮ ಸಹಾಯ ಮಾಡಲಿದೆ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡಿದ್ದು, ಆ ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷವಾಗಿದ್ದು, ಬಾಂಡ್ ಹಣ ಸಿಗುವಂತೆ ಆಗಿದೆ. ಈ ಹಣದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡದೇ ಆಕೆಯ ಉನ್ನತ ಶಿಕ್ಷಣಕ್ಕೆ ವಿನಿಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯಾರೂ ಶಾಶ್ವತವಲ್ಲ, ಅವರು ಮಾಡಿದ್ದ ಕೆಲಸ ಮಾತ್ರ ಶಾಶ್ವತ. ಆದ್ದರಿಂದ ಎಲ್ಲರೂ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಬೇಕು ಎಂದರು.

ಶಾಸಕ ಜಿ.ಟಿ.ದೇವೇಗೌಡ ಅವರು ರಾಜಕೀಯವಾಗಿ ಎಷ್ಟು ಬಲಿಷ್ಠವೋ ಅಷ್ಟು ಆಧ್ಯಾತ್ಮಿಕ ಹಾಗೂ ಧಾರ್ಮಿಕವಾಗಿ ಆಸಕ್ತಿ ಹೊಂದಿದ್ದಾರೆ. ಯಡಿಯೂರಪ್ಪ ಅವರು ಕೊಟ್ಟ ಮಾತು ಏನೇ ಇರಲಿ, ಅದನ್ನು ಉಳಿಸಿಕೊಳ್ಳುವ ಸದೃಢ ರಾಜಕಾರಣಿ ಎಂದರೆ ತಪ್ಪಾಗಲಾರದು. ಅಧಿಕಾರದಲ್ಲಿ ಇದ್ದಾಗ ಪ್ರೀತಿಸುವುದಲ್ಲ, ಇಲ್ಲದೇ ಇದ್ದರೂ ನೀಡುವ ಪ್ರೀತಿಗೆ ಅವರ ಕಾರ್ಯ ನಿಜಕ್ಕೂ ಅಜಾರಾಮರ ಎಂದು ಹೇಳಿದರು.

ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ ಮಾತನಾಡಿ, ಯಡಿಯೂರಪ್ಪ ಅವರು ಮಠಗಳ ಸೇವೆಯನ್ನು ಗುರುತಿಸಿದ್ದಾರೆ. ಬರಡನಪುರ ಮಠದ ಸ್ವಾಮೀಜಿ ಅವರು ಸಣ್ಣ ಪ್ರಮಾಣದಲ್ಲಿ ನಿರ್ಮಿಸಿದ್ದ ಈ ಮಠ ಅವರ ಶ್ರಮದಿಂದ ಹೆಮ್ಮರವಾಗಿದೆ. ರಾಜ್ಯದುದ್ದಕ್ಕೂ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮಠಗಳು ಕಾರಣವಾಗಿವೆ ಎಂದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾರ್ಗದರ್ಶನದಿಂದ ಮಠ ಮಾನ್ಯಗಳು ಶಿಕ್ಷಣ ಸೇವೆಯನ್ನು ನೀಡುತ್ತಿವೆ ಎಂದರು.

ನಾನು ಹುಣಸೂರಿನ ಶಾಸಕ ಆಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕರೆ ಮಾಡಿದ್ದರು. ನೀವು ನನ್ನ ಜತೆ ಬಿಜೆಪಿಗೆ ಬರಬೇಕು ಎಂದು ಕೋರಿದ್ದರು. ಆಗ ತಕ್ಷಣ ನಾನು ಒಪ್ಪಿಕೊಂಡು ಬಿಜೆಪಿ ಸೇರಿದ್ದೆ. ಆದರೆ ಅಂದು ಯಡಿಯೂರಪ್ಪ ಅವರ ಬಳಿ ಜಿ.ಟಿ.ದೇವೇಗೌಡ ಹಣ ತೆಗೆದುಕೊಂಡು ಬಿಜೆಪಿ ಸೇರಿದ್ದಾನೆ ಎಂದು ಅಪಪ್ರಚಾರ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಪರಶಿಮೂರ್ತಿ ಸ್ವಾಮೀಜಿ ಅವರ ಶ್ರಮ ಇವತ್ತಿನ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಬರಡನಪುರ ಗ್ರಾಮ ಇನ್ನಷ್ಟು ಅಭಿವೃದ್ಧಿಯಾಗಲು ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬ್ರಹ್ಮನ್ಮಠದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರಿನ ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಶಾಸಕರಾದ ಟಿ.ಎಸ್.ಶ್ರೀವತ್ಸ, ಹರೀಶ್‌ಗೌಡ, ವಕೀಲ ಸುರೇಶ್, ಚಿಂತಕ ಶಂಕರ್ ದೇವನೂರು, ವೀರಶೈವ ಮುಖಂಡ ಪೊನ್ನಾಚಿ ಮಹದೇವಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net