ದೊಡ್ಮನೆಯಲ್ಲಿ ಗಮನ ಸೆಳೆದ ಪಾರಂಪರಿಕ ನಾಟಿ

31kls1nati
ಗದ್ದೆ ನಾಟಿ
Published on

ಕಳಸ: ಮಲೆನಾಡಿನಲ್ಲಿ ಯಾಂತ್ರಿಕೃತ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮಧ್ಯೆ ಭತ್ತ ಬೆಳೆಯುವುದೇ ವಿರಳವಾದ ಪ್ರಸ್ತುತ ದಿನದಲ್ಲಿ ನೂರಾರು ಜನರು ಸೇರಿ ಗದ್ದೆ ನಾಟಿ ಮಾಡುವುದನ್ನು ಹೊರನಾಡು ದೊಡ್ಮನೆ ಗದ್ದೆಯಲ್ಲಿ ಕಾಣಬಹುದಾಗಿದೆ.

ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ ಇವರ ಗದ್ದೆಯಲ್ಲಿ ಹಿಂದಿನ ಸಾಂಪ್ರದಾಯದಂತೆ ಯಾವುದೇ ಪ್ರತಿಲಾಕ್ಷೆ ಇಲ್ಲದೆ ನೂರಾರು ಜನರಿಂದ ಗದ್ದೆ ನಾಟಿ ಮಾಡುವ ದೃಶ್ಯ ಕಂಡು ಬಂತು.

ಗುರುವಾರ ಈ ಗದ್ದೆಯಲ್ಲಿ ಕೃಷಿಕರಿಗೆ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಹೊರನಾಡು, ಮೆಣಸಿನಹಾಡ್ಯ, ಜೈಪುರ, ಶೃಂಗೇರಿ, ಬೇಲೂರು, ಕಳಸ ಮುಂತಾದ ಕಡೆಯಿಂದ ತಂಡೋಪ ತಂಡವಾಗಿ ಬಂದ ಸುಮಾರು 500ಕ್ಕೂ ಹೆಚ್ಚು ಜನ ಕೃಷಿಕರು ಗದ್ದೆಗಿಳಿದು ನಾಟಿ ಮಾಡುವುದನ್ನು ನೋಡುವುದೇ ಅತ್ಯಂತ ಮನೋಹರವಾಗಿತ್ತು.

ಜೈಪುರ ಕಡೆಯ ಹಿರಿಯರೊಬ್ಬರನ್ನು ಮಾತನಾಡಿಸಿದಾಗ ನಾನು ಅನಾದಿಕಾಲದಿಂದಲೂ ಇಲ್ಲಿಯ ಗದ್ದೆ ನಾಟಿಗೆ ಬಂದು ನಮ್ಮ ಸೇವೆಯನ್ನು ಮಾಡಿ ಹೋಗುತ್ತಿದ್ದೇನೆ. ಹಿಂದೆ ನಾನು ಗದ್ದೆ ನಾಟಿ ಮಾಡುತ್ತಿದ್ದೆ. ಆದರೆ ಈಗ ವಯಸ್ಸಾಗಿದೆ ಗದ್ದೆಗೆ ಇಳಿಯಲು ಆಗುತ್ತಿಲ್ಲ. ಆದರೂ ಎರಡು ಸಸಿ ನೆಟ್ಟು ಹೋಗೋಣ ಎಂದು ಬಂದಿದ್ದೇನೆ. ಇಲ್ಲಿಗೆ ಬಂದು ಗದ್ದೆ ಸಸಿ ನೆಡುವುದೇ ನಮ್ಮ ಪಾಲಿನ ಪುಣ್ಯ ಎಂದು ತಿಳಿಸಿದರು.

ಮಹಿಳೆಯೊಬ್ಬರು ಮಾತನಾಡಿ, ನಾವು ಬಸರೀಕಟ್ಟೆಯಿಂದ ಬಂದಿದ್ದೇವೆ. ಸುಮಾರು 15 ವರ್ಷಗಳಿಂದ ಬಂದು ನಮ್ಮ ಸೇವೆ ಮಾಡಿ ಹೋಗುತ್ತಿದ್ದೇವೆ. ಈ ಬಾರಿ ನಮ್ಮ ಕುಟುಂಬ ಸಹಿತ ಬಂದಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net