ದೇಶದ್ರೋಹ ಕಾನೂನಿಗೆ ತಾತ್ಕಾಲಿಕ ತಡೆಯಾಜ್ಞೆ; ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು

Supreme
Published on

ನವದೆಹಲಿ: ಬಹುರ್ಚಚಿತ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಕಾನೂನಿಗೆ ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿದೆ. ಇದು ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ತನ್ನ ಐತಿಹಾಸಿಕ ತೀರ್ಪಿನಲ್ಲಿ ಸ್ಪಷ್ಟ ಪಡಿಸಿದೆ.

ಏನಿದು ಪ್ರಕರಣ?: ದೇಶದ್ರೋಹ ಆರೋಪ ಎದುರಿಸುತ್ತಿರುವವರು ಕಾನೂನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಸಂಬಂಧ ಈ ಮೊದಲು ಪ್ರತಿಕ್ರಿಯೆ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಸೆಕ್ಷನ್ 124ಎ ಅನ್ನು ಸಮರ್ಥಿಸಿಕೊಂಡಿತ್ತು. ಈ ಮಧ್ಯೆ, ಮಸೀದಿಯಲ್ಲಿ ಧ್ವನಿವರ್ಧಕ ಬಳಕೆ ಮತ್ತು ಇದಕ್ಕೆ ಪ್ರತಿಯಾಗಿ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆಯ ವಿವಾದದಲ್ಲಿ ದೇಶದ್ರೋಹ ಕಾಯ್ದೆಯ ದುರ್ಬಳಕೆ ಆಗುತ್ತದೆ ಎಂಬ ವಿಚಾರ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಹೊಸದಾಗಿ ಸಲ್ಲಿಸಿದ ಅಫಿಡವಿಟ್​ನಲ್ಲಿ ಈ ಕಾನೂನನ್ನು ಮರುಪರಿಶೀಲನೆಗೆ ಒಳಪಡಿಸಲು ಸಿದ್ಧ ಎಂದು ಕೇಂದ್ರ ಹೇಳಿತ್ತು. ಇದನ್ನು ಮಂಗಳವಾರ ಮಾನ್ಯ ಮಾಡಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ಬಾಕಿ ಇರುವ ಪ್ರಕರಣಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ 24 ತಾಸಿನ ಗಡುವು ನೀಡಿತ್ತು.

ದಿನದ ವಾದ-ಪ್ರತಿವಾದ: ಬಾಕಿ ಪ್ರಕರಣಗಳು ಈಗ ಪೊಲೀಸ್ ಅಥವಾ ಸರ್ಕಾರದ ಮುಂದೆ ಇಲ್ಲ. ಅವುಗಳು ನ್ಯಾಯಾಲಯಗಳ ಮುಂದಿವೆ. ಹಾಗಾಗಿ ಅವುಗಳನ್ನು ಏನು ಮಾಡಬೇಕೆಂಬುದನ್ನು ಕೋರ್ಟ್​ಗಳೇ ನಿರ್ಧರಿಸಬೇಕು. ಏಕೆಂದರೆ, ದೇಶಾದ್ಯಂತ ಈ ಕಾನೂನಿನಡಿ ದಾಖಲಾಗಿರುವ ಪ್ರಕರಣಗಳ ಸತ್ವ ಏನು, ಎಷ್ಟು ಎಂಬುದು ನಮಗೆ ತಿಳಿದಿಲ್ಲ.

ಮುಖ್ಯಾಂಶಗಳು

  • ಸುಪ್ರೀಂ ತೀರ್ಪಿನ ಬಳಿಕ ದೇಶದ್ರೋಹ ಆಪಾದನೆಯ ಹೊಸ ಕೇಸ್ ದಾಖಲಿಸುವಂತಿಲ್ಲ
  • ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ ವಿಚಾರಣೆಗೂ ತಡೆ
  • ಈ ಕಾನೂನಿನಡಿ ಬಂಧಿತ ರಾಗಿರುವವರಿಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ

ಇದು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿಯೂ ಇರಬಹುದು. ಭಯೋತ್ಪಾದನಾ ಆರೋಪವೂ ಸೇರಿರಬಹುದು. ಹೀಗಾಗಿ ಕೋರ್ಟ್​ನ ತೀರ್ಮಾನ ಏನಿರುತ್ತದೆ ಎಂದು ನಾವು ಊಹೆ ಮಾಡಲಾಗದು ಎಂದು ಕೇಂದ್ರ ಸರ್ಕಾರ ಹೇಳಿತು. ಇದನ್ನು ವಿರೋಧಿಸಿದ ಅರ್ಜಿದಾರರು, ಬ್ರಿಟಿಷ್ ಕಾಲದ ಈ ಕಾನೂನಿನ ಮರುಪರಿಶೀಲನೆ ಮಾಡಲು ಸರ್ಕಾರ ಸಿದ್ಧವಿರುವುದರಿಂದ, ಈ ಪ್ರಕ್ರಿಯೆ ಮುಗಿಯುವವರೆಗೆ ಸೆಕ್ಷನ್ 124ಎ ಬಳಸದಂತೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ದೇಶಾದ್ಯಂತ 800ಕ್ಕೂ ಹೆಚ್ಚು ದೇಶದ್ರೋಹದ ಪ್ರಕರಣಗಳು ದಾಖಲಾಗಿದ್ದು, 13 ಸಾವಿರ ಜನರು ಜೈಲಿನಲ್ಲಿ ಇದ್ದಾರೆ ಎಂದು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಹೇಳಿದರು. ಇದಕ್ಕೆ ಮರುಜವಾಬು ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದ ನ್ಯಾಯಾಂಗದ ಗೌರವವನ್ನು ಹಾಳುಮಾಡಲು ಸಾಧ್ಯವಿಲ್ಲ ಎಂದರು.

ಸರ್ಕಾರದ ಸಲಹೆ: ಸೆಕ್ಷನ್ 124ಎ ಅನ್ನು ಪೂರ್ಣವಾಗಿ ನಿರರ್ಥಕ ಮಾಡುವುದಿಲ್ಲ. ಅದರಲ್ಲಿ ದುರ್ಬಳಕೆಗೆ ಅವಕಾಶ ಇರುವ ಅಂಶ ಮರುಪರಿಶೀಲಿಸಲಾಗುವುದು. ಆರೋಪದಲ್ಲಿ ನಿಜಾಂಶ ಇದೆಯೇ ಎಂಬುದನ್ನು ಪೊಲೀಸ್ ಅಧೀಕ್ಷಕ ಹಂತದ ಅಧಿಕಾರಿ ತೀರ್ವನಿಸಬೇಕು. ನಂತರವಷ್ಟೇ ಎಫ್​ಐಆರ್ ದಾಖಲಿಸಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧಾರದಲ್ಲಿ ಕಾನೂನಿಗೆ ತಡೆ ನೀಡಲಾಗದೆಂಬ ಸಲಹೆಗಳನ್ನು ಸರ್ಕಾರ ಸುಪ್ರೀಂಗೆ ತಿಳಿಸಿತು.

ಸೆಕ್ಷನ್ 124ಎ ಪ್ರಸ್ತುತ ಸನ್ನಿವೇಶಕ್ಕೆ ಅಪ್ರಸ್ತುತ ಎಂಬುದನ್ನು ಕೇಂದ್ರ ಒಪ್ಪಿರುವುದು ಸ್ಪಷ್ಟವಾಗಿದೆ. ಇದನ್ನು ಮರುಪರಿಶೀಲಿಸುವುದಾಗಿಯೂ ಹೇಳಿದೆ. ಈ ಪ್ರಕ್ರಿಯೆ ಮುಗಿಯುವವರೆಗೆ ಈ ಕಾನೂನನ್ನು ಕೇಂದ್ರ, ರಾಜ್ಯ ಸರ್ಕಾರಗಳು ಬಳಕೆ ಮಾಡುವುದಿಲ್ಲ ಎಂದು ಘನ ನ್ಯಾಯಾಲಯ ನಂಬುತ್ತದೆ ಮತ್ತು ನಿರೀಕ್ಷಿಸುತ್ತದೆ. ಒಂದು ವೇಳೆ ಹೊಸದಾಗಿ ಪ್ರಕರಣ ದಾಖಲಾದರೆ ಬಾಧಿತರು ಅದನ್ನು ಕೋರ್ಟ್​ನಲ್ಲಿ ಪ್ರಶ್ನಿಸಬಹುದಾಗಿದೆ. | ಎನ್.ವಿ. ರಮಣ ಸಿಜೆಐ ದೇಶದ್ರೋಹದ ಕಾನೂನಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಸರ್ಕಾರದ ನಿಲುವನ್ನು ಕೋರ್ಟ್​ಗೆ ತಿಳಿಸಿದ್ದೇವೆ. ಶಾಸಕಾಂಗ, ನ್ಯಾಯಾಂಗಗಳು ಪರಸ್ಪರ ಗೌರವಿಸಬೇಕು. ನಮಗೆ ಲಕ್ಷ್ಮಣರೇಖೆ ಅರಿವಿದೆ. ಈ ಗಡಿ ಮೀರಿ ಯಾರೂ ನಡೆಯಬಾರದು | ಕಿರಣ್ ರಿಜಿಜು ಕೇಂದ್ರ ಕಾನೂನು ಸಚಿವ ದೇಶದ್ರೋಹದ ಕಾನೂನಿಗೆ ತಡೆ ಬಿದ್ದಿರುವುದರಿಂದ ಜಯ ಸಿಕ್ಕಿದೆ. ಹೊಸ ಕೇಸ್ ಹಾಕದಂತೆ ಮತ್ತು ಕೇಸ್ ಎದುರಿಸುತ್ತಿರುವವರಿಗೆ ಕೂಡಲೇ ಜಾಮೀನೂ ನೀಡುವಂತೆಯೂ ಘನ ನ್ಯಾಯಾಲಯ ಸೂಚಿಸಿದೆ. ಇದಕ್ಕಾಗಿ ಧನ್ಯವಾದ. | ಮಹುವಾ ಮೊಯಿತ್ರಾ ಟಿಎಂಸಿ ಸಂಸದೆ, ಅರ್ಜಿದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net