

ಭಾರತವು ಅತ್ಯಂತ ಸಮೃದ್ಧ ದೇಶ. ಇಲ್ಲಿ ಉತ್ತಮ ಮಳೆ, ಗಾಳಿ, ಸೂರ್ಯ ರಶ್ಮಿ ಲಭ್ಯವಿದೆ. ಈ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳವಲ್ಲಿ ನಾವು ಹಿಂದೆ ಬಿದ್ದೆದ್ದೇವೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ನಾರಾಯಣಗೌಡ ಸಲಹೆ ನೀಡಿದರು.
ಮಾನಸ ಗಂಗೋತ್ರಿಯ ಭೌತ ವಿಜ್ಞಾನ ವಿಭಾಗದ ಸಭಾಂಗಣದಲ್ಲಿ ಹಾ.ಮಾ.ನಾಯಕ ಪ್ರತಿಷ್ಠಾನವು ಶನಿವಾರ ಆಯೋಜಿಸಿದ್ದ ಭಾರತದಲ್ಲಿ ಹಸಿರು ಕ್ರಾಂತಿ ಮತ್ತು ಆಹಾರ ಸುಸ್ಥಿರತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಶೇ. 42 ಜನ ನೇರವಾಗಿ ಕೃಷಿಯಲ್ಲಿ ತೊಡಗಿಸಿಕೊಂಡರೆ, ಶೇ.25 ರಷ್ಟು ಜನ ಪರೋಕ್ಷವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕೃಷಿಯು ಭಾರತದ ಆರ್ಥಿಕತೆಯ ಶಕ್ತಿಯಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಭಾರತದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಮಣ್ಣಿನ ಫಲವತ್ತತೆಯು ಶೇ.0.75 ಇತ್ತು. ಅದು ಶೇ. 0.33ಕ್ಕೆ ಕುಸಿದಿದೆ. ಸಾವಯವ ಕೃಷಿ ಪದ್ಧತಿಯ ಮೂಲಕ ಫಲವತ್ತತೆ ಹೆಚ್ಚಿಸಲು ಸಾಧ್ಯವಿದ್ದು, ಈ ಬಗ್ಗೆ ರೈತರು ಗಮನಹರಿಸಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 85 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದರು, ಬೇರೆ ದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. 1963ರಲ್ಲಿ ಇಂದಿರಾಗಾಂಧಿ ಅವರು ಭಾರತ ಆಹಾರ ಭದ್ರತೆ ಸಾಧಿಸಿದ ಮೇಲೆ ನಿಜಾರ್ಥದ ಸ್ವಾತಂತ್ರ್ಯ ಪಡೆದಿದೆ. ಆಹಾರಕ್ಕಾಗಿ ಬೇರೆ ದೇಶಕ್ಕೆ ಕೈಯೊಡ್ಡಿದರೆ ಸ್ವತಂತ್ರರಾಗಿ ಇರಲು ಸಾಧ್ಯವಿಲ್ಲ ಎಂದು ಸಂದೇಶ ನೀಡಿದರು. ಇದು ಆಹಾರ ಭದ್ರತೆಗೆ ಹೆಚ್ಚಿನ ಪ್ರೇರಣೆ ನೀಡಿತು ಎಂದರು.
ಕನ್ನಡ ಭಾಷಾ ಸಂಸ್ಥಾನದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥೆ ಪ್ರೊ. ಎನ್.ಕೆ. ಲೋಲಾಕ್ಷಿ, ಪ್ರತಿಷ್ಠಾನದ ಕೋಶಾಧ್ಯಕ್ಷ ಮಹದೇವ್, ಸದಸ್ಯ ವೆಂಕಟರಾಮಯ್ಯ ಇದ್ದರು.