ದೇವಿಯ ಅಮ್ಮನಹಬ್ಬದ ಬಾನಸೇವೆ

4 kdr 1 ratostava
ಕಡೂರಿನಲ್ಲಿ ದುರ್ಗಾಂಬ ದೇವಿಯ ಬಾನದ ಸೇವೆ ಅಂಗವಾಗಿ ಕೆಎಲ್ವಿ ವೃತ್ತದಲ್ಲಿ ನೆರೆದಿದ್ದ ಜನಸ್ತೋಮ.
Published on

ಕಡೂರು: ತಾಲೂಕಿನ ಅಂತರಘಟ್ಟೆಯ ದುರ್ಗಾಂಬ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಪಟ್ಟಣದಲ್ಲಿ ದೇವಿಯ ಅಮ್ಮನಹಬ್ಬದ ಬಾನಸೇವೆ ಸಂಭ್ರಮದಿಂದ ನಡೆಯಿತು.ಪಾನಕದ ಗಾಡಿಗಳನ್ನು ಪಟ್ಟಣದ ದೊಡ್ಡಪೇಟೆಯ ಮೂಲಕ ಆರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಾಲು-ಸಾಲಾಗಿ ಹೊಡೆದುಕೊಂಡು ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದವು. ಮೆರವಣಿಗೆಯಲ್ಲಿ ಜೋಡೆತ್ತುಗಳಿಗೆ ಮಧುವಣಗಿತ್ತಿಯಂತೆ ಶೃಂಗಾರಗೊಳಿಸಿದ್ದು ಎಲ್ಲರ ಗಮನಸೆಳೆಯಿತು.

ಅದ್ದೂರಿ ಮೆರವಣಿಗೆಯ ಮುಂಭಾಗದಲ್ಲಿ ಚಿತ್ರಗೀತೆಗೆ ಯುವಕರು ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಕುಣಿದು ಸಂಭ್ರಮಿಸಿದರು.

ಮೆರವಣಿಗೆಯು ಛತ್ರದ ಬೀದಿ ಸಮೀಪ ಬರುತ್ತಿದ್ದಂತೆ ಪಾನಕದ ಬಂಡಿಗಳನ್ನು ವೇಗವಾಗಿ ಓಡಿಸುತ್ತಿದ್ದು ಸಾಮಾನ್ಯವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ಬಂಡಿಗಳು ಓಡಿಸುವ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಪಟ್ಟರು.

4 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಗಾಡಿಯಲ್ಲಿ ಪಾನಕಗಳ ಹಂಡೆಯನ್ನಿಟ್ಟುಕೊಂಡು ಗ್ರಾಮದೇವತೆ ಕೆಂಚಾಂಬ ದೇಗುಲದ ಬಳಿ ಗಾಡಿಗಳನ್ನು ನಿಲ್ಲಿಸಿ ದೇವಿಗೆ ಪಾನಕದ ನೈವೇದ್ಯ ಅರ್ಪಿಸಿ ನಂತರ ಬನ್ನಿಮರದವರೆಗೆ ಸುತ್ತ ಪಾನಕದ ಗಾಡಿ ಓಡಿಸಿದರು. ಮೆರವಣಿಗೆಯಲ್ಲಿ ಸಿಪಿಐ ರಫೀಕ್ ಹಾಗೂ ಪಿಎಸ್‌ಐ ಪವನ್‌ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net