

ಕೆ.ಆರ್.ನಗರ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಅತ್ಯಧಿಕ ಮತಗಳಿಂದ ಗೆಲವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಅಭಿಮಾನಿಗಳು ಮತ್ತು ಕಾರ್ಯಕರ್ತರು ದೇವರಿಗೆ ಮಾಡಿದ ಹರಕೆ ತೀರಿಸಲು ಪ್ರಾರಂಭಿಸಿದ್ದಾರೆ.
ಕ್ಷೇತ್ರದಲ್ಲಿ ತಮ್ಮ ರಾಜಕೀಯ ನಾಯಕರ ಗೆಲುವಿಗಾಗಿ ಅಭಿಮಾನಿಗಳು ವಿವಿಧ ರೀತಿಯಾಗಿ ಹರಕೆ ಮಾಡಿಕೊಂಡಿದ್ದು ಚುನಾವಣೆಗು ಮುನ್ನ ಡಿ.ರವಿಶಂಕರ್ ಮತ್ತು ಸಾ.ರಾ.ಮಹೇಶ್ ಬೆಂಬಲಿಗರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾಗಿ ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಮಯದಲ್ಲಿ ತಮ್ಮ ನಾಯಕರ ಗೆಲುವಿಗಾಗಿ ಅವರ ಫೋಟೋಗಳನ್ನು ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡು ದೇವರಲ್ಲಿ ಪ್ರಾರ್ಥಿಸಿದ್ದರು.
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಮಂಜುಳಾ ಎಂಬುವರು ಶಾಸಕ ಡಿ.ರವಿಶಂಕರ್ ಪರವಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ಮನೆ ಮನೆ ತೆರಳಿ ಭಿಕ್ಷೆ ಬೇಡಿ ಅರಕಲಗೂಡು ತಾಲೂಕಿನ ಲಕ್ಕೂರು ಮೂಡಲಕೊಪ್ಪಲು ಗ್ರಾಮದ ಶ್ರೀ ಮದನಂಟಿ ಅಮ್ಮ ದೇವರಿಗೆ ಪ್ರಸಾದ ತಯಾರಿಸಿ ಎಡೆ ಇಟ್ಟು ತಾವು ಮಾಡಿಕೊಂಡ ಹರಕೆ ತೀರಿಸಿದ್ದಾರೆ.
ಅದೇ ರೀತಿ ಪಟ್ಟಣದ ಮಧುವನಹಳ್ಳಿ ಬಡಾವಣೆಯ 23ನೇ ವಾರ್ಡಿನ ಶಾಸಕ ಡಿ.ರವಿಶಂಕರ್ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತೆಯರು ದೇವಮ್ಮ ಅವರ ನೇತೃತ್ವದಲ್ಲಿ ನಾಡಿನ ಆದಿ ದೇವತೆ ಮೈಸೂರಿನ ಚಾಮುಂಡೇಶ್ವರಿ ತಾಯಿ ದೇವಸ್ಥಾನದಲ್ಲಿ ಡಿ.ರವಿಶಂಕರ್ ರವರ ಪೋಟೋ ಒಳಗೊಂಡ ಕರಪತ್ರಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನಾಯಕನ ಗೆಲುವಿನ ಹರಕೆ ತೀರಿಸಿದ್ದಾರೆ.
ಅಲ್ಲದೇ ಇದೇ ಬಡಾವಣೆಯ ಕೆಲವು ಯುವಕರು ತಾಲೂಕಿನ ಇತಿಹಾಸ ಪ್ರಸಿದ್ದವಾದ ಸತ್ಯ ನಿಷ್ಠೆಗೆ ಹೆಸರುವಾಸಿಯಾದ ಕಪ್ಪಡಿ ಕ್ಷೇತ್ರದಲ್ಲಿ ತಮ್ಮ ನಾಯಕ ಶಾಸಕ ಡಿ.ರವಿಶಂಕರ್ ಗೆಲುವಿಗಾಗಿ ಮಾಡಿಕೊಂಡ ಹರಕೆಗಾಗಿ ಮುಡಿ ಸೇವೆ ಮಾಡಿಸುವ ಮೂಲಕ ಹರಿಕೆ ತೀರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.
ಕಳೆದ 10 ವರ್ಷಗಳಿಂದ ತಂದೆ ದೊಡ್ಡಸ್ವಾಮೇಗೌಡರು ಹಾಗೂ ಮಗ ಡಿ.ರವಿಶಂಕರ್ ರವರು ತಲಾ ಒಂದೊಂದು ಅವಧಿಗೆ ಸೋಲು ಕಂಡಿದ್ದರು ವಿಚಲಿತರಾಗದೇ ಸತತವಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಜನ ಮಾನಸದಲ್ಲಿ ಅನುಕಂಪದ ಅಲೆ ಎಬ್ಬಿಸಿದ್ದರು. ಇದರಿಂದಾಗಿ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಯಾರು ಪಡೆಯದಷ್ಟು 27242 ಮತಗಳ ಅಂತರದಿಂದ ಜೆಡಿಎಸ್ ಶಾಸಕರಾಗಿದ್ದ ಸಾ.ರಾ.ಮಹೇಶ್ ವಿರುದ್ದ ಡಿ.ರವಿಶಂಕರ್ ಗೆಲುವು ಸಾಧಿಸಲು ಸಾಧ್ಯವಾಯಿತು.
ತಮ್ಮ ನಾಯಕರ ಗೆಲುವಿಗಾಗಿ ವಿವಿಧ ರೀತಿಯಲ್ಲಿ ಅವರ ಅಭಿಮಾನಿಗಳು, ಕಾರ್ಯಕರ್ತರು ದೇವರಲ್ಲಿ ಪ್ರಾರ್ಥನೆ ಮತ್ತು ಹರಕೆ ಹೊತ್ತಿದ್ದು ಈಗ ಮಾಡಿಕೊಂಡ ಹರಿಕೆಗಳನ್ನು ತೀರಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿ ಮಾಡಿದ ದೇವರಿಗೆ ಪೂಜಿಸುವ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಯಾವ ರೀತಿ ಹರಿಕೆಗಳನ್ನು ತೀರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.