ದೇವರ ವಿಗ್ರಹಗಳನ್ನು ಭಗ್ನಗೊಳಿಸಿದ ಕಿಡಿಗೇಡಿಗಳು

Published on

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಸಂತೋಷಿ ಮಾತಾ ದೇವಾಲಯದ ಗೋಪುರದ ಮೇಲಿನ ದೇವರ ಕೆಲ ವಿಗ್ರಹಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.
ಗೋಪುರದ ಮೇಲಿನ ಕಳಶಗಳು, ಗಣೇಶ ಮತ್ತು ಸಂತೋಷಿ ಮಾತಾ ವಿಗ್ರಹದ ಕೈ, ಸಿಂಹದ ವಿಗ್ರಹವನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಜಖಂಗೊಳಿಸಿದ್ದಾರೆ. ಆಲಯದಲ್ಲಿ ಕುಂಭಾಭಿಷೇಕ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಕಳೆದ ಎರಡ್ಮೂರು ದಿನಗಳಿಂದಲೂ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ. ಆಲಯವು ಸದಾ ವಾಹನ ಮತ್ತು ಜನದಟ್ಟಣೆಯಿಂದ ಕೂಡಿರುವ ಬೆಂಗಳೂರು ಜೋಡಿ ರಸ್ತೆಯ ಬದಿಯಲ್ಲಿದೆ. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿದಿನ ರಾತ್ರಿ ಆಲಯದ ಗೇಟ್ಗೆ ಬೀಗ ಹಾಕಲಾಗುತ್ತದೆ. ಇದರ ನಡುವೆಯೂ ಕಿಡಿಗೇಡಿಗಳು ಗೋಪುರವನ್ನೇರುವ ಮೆಟ್ಟಿಲುಗಳ ಮೂಲಕ ಹೋಗಿ, ಜಖಂಗೊಳಿಸಿದ್ದಾರೆ.
ದೇವಾಲಯ ಆಡಳಿತ ಸಮಿತಿಯು ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆಲಯ ಮತ್ತು ಸಮೀಪದ ವೃತ್ತದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net