

ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ಶೋಕಾಚರಣೆ ಆಗಿದ್ದು, ಈ ಘಟನೆಗೆ ನೇರವಾಗಿ ಸರ್ಕಾರವೇ ಕಾರಣ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒರಟು ವ್ಯಕ್ತಿ ಎಂದುಕೊಂಡಿದ್ದೆ. ಆದರೆ ನೀವು ಸಂವೇದನೆ ಇಲ್ಲದ ನಿರ್ಭಾವುಕ ಮನುಷ್ಯ ಎಂಬುದು ನಿನ್ನೆಯ ಘಟನೆಯಿಂದ ಗೊತ್ತಾಗಿದೆ. ಜಮೀರ್ ಮಗ, ರಿಜ್ವಾನ್ ಮಗ, ಮುಖ್ಯ ಕಾರ್ಯದರ್ಶಿ ಮಗಳು, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದದ ಮುಂದೆ ಕಾರ್ಯಕ್ರಮ ಮಾಡಿದರಾ? ಎಂದು ಟೀಕಿಸಿದ ಅವರು, ಯೋಗಿ ಅದಿತ್ಯನಾಥಗೆ ಭದ್ರತೆ ಪಾಠ ಮಾಡಿದ್ದ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಈಗ ಎಲ್ಲಿ ಹೋದರು ಎಂದು ಜರಿದರು.
ಯುಪಿ ಸಿಎಂ 60 ಕೋಟಿ ಜನರನ್ನು ಸಂಭಾಳಿಸಿದ್ದಾರೆ. ನೀವು 60 ಸಾವಿರ ಜನರನ್ನು ಸಂಭಾಳಿಸಲು ಆಗಲಿಲ್ಲ. ಕಾಂಗ್ರೆಸ್ಗೆ ದಾರಿದ್ರ್ಯ ಬಂದಿದ್ದು, ಆರ್ಸಿಬಿ ಗೆಲುವಲ್ಲಿ ಪ್ರಚಾರ ಪಡೆಯಲು ಜನರನ್ನು ಬಲಿ ಕೊಟ್ಟಿದೆ. ವಿರಾಟ್ ಕೋಹ್ಲಿ ಫೋನ್ ಮಾಡಿ ಇವತ್ತೇ ಪ್ರೋಗ್ರಾಂ ಮಾಡಿ ಎಂದಿದ್ರಾ?, ಮರುದಿನ ಕಾರ್ಯಕ್ರಮ ಮಾಡುವ ಒತ್ತಡವೇನಿತ್ತು? ರೋಡ್ ಶೋ ನಡೆಸಿದ್ದರೆ ಲಕ್ಷಾಂತರ ಜನ ನೋಡುತ್ತಿದ್ದರು. ಸರ್ಕಾರಕ್ಕೆ ಮಿನಿಮಮ್ ಕಾಮನ್ ಸೆನ್ಸ್ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಟೀಕಿಸಿದರು.
ಆಂಧ್ರದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಈಗ ಇಲ್ಲಿ ಸಿಎಂ ಅರೆಸ್ಟ್ ಆಗ್ತಾರಾ?, ಡಿಸಿಎಂ ಅರೆಸ್ಟ್ ಆಗ್ತಾರಾ? ಅಥವಾ ಗೃಹಮಂತ್ರಿ ತಲೆದಂಡ ಆಗುತ್ತಾ? ತಿಪ್ಪೆ ಸಾರಿಸಲೆಂದು ಸರ್ಕಾರ ತನಿಖೆಗೆ ಆದೇಶಿಸಿದೆ. ಇದರಿಂದ ಪ್ರಯೋಜನ ಇಲ್ಲ ಎಂದರು.