ಭಾರಿ ಮಳೆ; 48 ಮನೆಗಳಿಗೆ ನುಗ್ಗಿದ ನೀರು

28 smg 1
Published on

ಶಿವಮೊಗ್ಗ: ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ವಿದ್ಯುತ್ ಸಂಪರ್ಕವಿಲ್ಲದೆ ಹಲವೆಡೆ ಜನರು ರಾತ್ರಿ ಇಡಿ ಜಾಗರಣೆ ಮಾಡಿದರು. ಶಿವಮೊಗ್ಗ ನಗರದಲ್ಲೇ 40ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ತಡರಾತ್ರಿಯೇ ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ನಾಲ್ಕೈದು ದಿನಗಳಿಂದ ಮಳೆ ಕೊಂಚ ಬಿಡುವು ನೀಡಿತ್ತು. ಆದರೆ ರಾತ್ರಿ ದಿಢೀರ್ ಶುರುವಾದ ಮಳೆಗೆ ಜನರು ಅಕ್ಷರಶಃ ಪರದಾಟ ನಡೆಸಿದರು. ಶಿವಮೊಗ್ಗ, ಭದ್ರಾವತಿ, ಸಾಗರ, ಹೊಸನಗರ, ತೀರ್ಥಹಳ್ಳಿ ಸೇರಿ ಜಿಲ್ಲೆಯ ಹಲವಡೆ ರಾತ್ರಿ ಇಡೀ ಮಳೆ ಸುರಿದಿದ್ದು ಭಾರಿ ಸಿಡಿಲು-ಗುಡುಗು ಸಹಿತ ಮಳೆ ಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಶಿವಮೊಗ್ಗ ನಗರದಲ್ಲೇ ಸತತ ಒಂದೂವರೆ ಗಂಟೆಗೂ ಅಧಿಕ ಮಳೆ ಸುರಿದಿದ್ದು ನಗರದ ಕೆಲ ಬಡಾವಣೆಗಳಲ್ಲಿನ 48 ಮನೆಗಳಿಗೆ ನೀರು ನುಗ್ಗಿದೆ. ಭಾರಿ ಮಳೆಯಿಂದ ಚಿಕ್ಕಲ್ ಬಡಾವಣೆಯ ಮೂರನೇ ಕ್ರಾಸಿನಲ್ಲಿರುವ ಎಡಭಾಗದ ಎಲ್ಲ ಮನೆ, ಸಿದ್ದೇಶ್ವರನಗರ ಬಡಾವಣೆಯ 1ರಿಂದ 3 ಕ್ರಾಸ್, ಬಾಪೂಜಿನಗರ, ಆರ್‌ಎಂಎಲ್ ನಗರದಲ್ಲೂ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತು. ತಡರಾತ್ರಿಯೇ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಹಾನಿ ಬಗ್ಗೆ ಪಾಲಿಕೆ ಇಂಜಿನಿಯರ್, ಸ್ಥಳೀಯ ಕಾರ್ಪೊರೇಟರ್ ಹಾಗೂ ಗ್ರಾಮಲೆಕ್ಕಿಗರು ಗುರುವಾರ ಬೆಳಗ್ಗೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು.

ಶಿವಮೊಗ್ಗ ತಾಲೂಕಿನ ನಿದಿಗೆ ಗ್ರಾಪಂನ ಮಾರಿಯಮ್ಮ ಕಾಲನಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಪಾರ್ವತಮ್ಮ-ನರಸಿಂಹಯ್ಯ ದಂಪತಿ ಮನೆ ಸಂಪೂರ್ಣ ಬಿದ್ದಿದ್ದು ಮೂವರು ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net