

ಕಡೂರು: ತಾಲೂಕಿನ ಎಮ್ಮೆದೊಡ್ಡಿ ಬಳಿಯ ಸಿದ್ದರಹಳ್ಳಿ ಗ್ರಾಮದ ಸಮೀಪ ಚಿರತೆಯೊಂದು ಇಬ್ಬರು ದಾರಿಹೋಕರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದು ಗಾಯಾಳುಗಳನ್ನು
ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಬೆಳಗ್ಗೆ ಮದಗದಕೆರೆ ಮೇಲ್ಭಾಗದ ಸಣ್ಣಸಿದ್ದರಹಳ್ಳಿ ಗ್ರಾಮದ ಮಂಜುನಾಥ ತಮ್ಮ ಮೊಮ್ಮಗನೊಡನೆ ಬೈಕ್‌ನಲ್ಲಿ ಕಡೂರು ಕಡೆಗೆ ಹೋಗುತ್ತಿರುವಾಗ ಗ್ರಾಮದ ರಸ್ತೆಯಲ್ಲಿ
ಏಕಾಏಕಿ ದಾಳಿ ಮಾಡಿದ ಚಿರತೆ ಅವರ ಎಡ ಕಿಬ್ಬೊಟ್ಟೆಯ ಭಾಗಕ್ಕೆ ಕಿತ್ತು ಗಾಯಗೊಳಿಸಿದೆ. ಬಳಿಕ ಅದೇ ಸಮಯದಲ್ಲಿ ದೊಡ್ಡಸಿದ್ದರಹಳ್ಳಿಯ ಮೂರ್ತಪ್ಪ ಎಂಬುವರು ಜಮೀನಿನ ಕಡೆ
ಹೊರಟಿದ್ದಾಗ ಅವರ ಮೇಲೂ ದಾಳಿ ಮಾಡಿದ ಚಿರತೆ ಅವರ ಎಡಗೈನ ಬೆರಳೊಂದು ಕಿತ್ತು ಗಾಯಗೊಳಿಸಿದೆ.
ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಗಾಯಾಳು ರಕ್ಷಿಸಲು ತೆರಳಿ ಕಲ್ಲು ಎಸೆದು ಕೂಗಾಡಿ ಚಿರತೆಯ ಬೆನ್ನಟ್ಟಿ ಅದನ್ನು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಮೇಲ್ಭಾಗದ ಕಾಡಿನ ಕಡೆಗೆ
ಅಟ್ಟಿದ್ದರು. ಅದಾದ ಸ್ವಲ್ಪ ಸಮಯದಲ್ಲಿ ಸಿದ್ದರಹಳ್ಳಿಯವರೇ ಆದ ಮಂಜುನಾಥ ಎನ್ನುವವರು ಗ್ರಾಮಕ್ಕೆ ವಾಪಸ್ ತೆರಳಲು ಹೊರಟಾಗ ಅವರ ಮೇಲೂ ದಾಳಿ ಮಾಡಲು ಯತ್ನಿಸಿದ
ಚಿರತೆಯನ್ನು ನೂರಾರು ಗ್ರಾಮಸ್ಥರು ಸೇರಿ ಮತ್ತೆ ಓಡಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಜತೆ ಆಗಮಿಸಿದ
ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಬೇರೆಲ್ಲೋ ಹಿಡಿದ ಚಿರತೆಯನ್ನು ಗ್ರಾಮದ ಸಮೀಪ ತಂದು ಬಿಟ್ಟು ಜನರ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದೀರಿ.
ಬೇಜಾವಾಬ್ದಾರಿತನದ ಕಾರ್ಯವೈಖರಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಲು ತಾಲೂಕು ಅರಣ್ಯ ಇಲಾಖೆಯೇ ಕಾರಣವಾಗಿದೆ ಎಂದು ವಲಯಾರಣ್ಯಾಧಿಕಾರಿ ವಿರುದ್ಧ
ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಮೋಹನ್ ನಾಯಕ್, ಆರ್ ಎಫ್‌ಒ ಹರೀಶ್, ತರೀಕೆರೆ ಡಿವೈಎಸ್‌ಪಿ ಹಾಲಮೂರ್ತಿರಾವ್ ಸ್ಥಳಕ್ಕೆ ಭೇಟಿ ನೀಡಿದ್ದರು. ಕಡೂರು ವೃತ್ತ ನಿರೀಕ್ಷಕ
ಎಂ.ರಫೀಕ್, ಪಿಎಸ್‌ಐ ಸಜಿತ್‌ಕುಮಾರ್, ಉಪವಲಯ ಅರಣ್ಯಾಧಿಕಾರಿ ಅಮೃತಾ, ಸಖರಾಯಪಟ್ಟಣ ಪಿಎಸ್‌ಐ ಪವನ್‌ಕುಮಾರ್, ಗ್ರಾಮೀಣ ಠಾಣೆಯ ಶಶಿಧರ್, ರಾಘವೇಂದ್ರ ಇದ್ದರು.