

ಚಿಕ್ಕಮಗಳೂರು: ಸಮಾಜದ ಒಳಿತಿಗಾಗಿ ದಾನಿಗಳು ನೀಡುವ ಕೊಡುಗೆ ಸಮರ್ಪಕವಾಗಿ ಬಳಕೆಯಾಗಬೇಕು. ಆಗ ಮಾತ್ರ ನಾವು ದಾನಿಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಮೀನಾ ನಾಗರಾಜ್ ಹೇಳಿದರು.
ಕುವೆಂಪು ಕಲಾಮಂದಿರದಲ್ಲಿ ಶನಿವಾರ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಆಯೋಜಿಸಿದ್ದ ನೂರು ಶಾಲೆಗಳಿಗೆ ನೂರು ಪುಸ್ತಕ ಯೋಜನೆಯಡಿ ಪುಸ್ತಕಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲಾಡಳಿತದ ಆಶೋತ್ತರಗಳನ್ನು ಅನುಷ್ಠಾನಕ್ಕೆ ತರಲು ಖಾಸಗಿ ಸಂಘ-ಸಂಸ್ಥೆಗಳು ಕೈಜೋಡಿಸಲು ಮುಂದೆ ಬಂದಾಗ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ನೀಡಿರುವ ಪುಸ್ತಕಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಿಂದಿನ ತಲೆಮಾರಿನಲ್ಲಿ ಪುಸ್ತಕ ಓದುವ ಹವ್ಯಾಸವಿತ್ತು. ಇತ್ತೀಚಿನ ತಲೆಮಾರಿನ ಮಕ್ಕಳು ಓದುವ ಅಭಿರುಚಿ ಕಳೆದುಕೊಂಡಿರಬಹುದು. ಅವರಲ್ಲೂ ಓದುವ ಹವ್ಯಾಸ ಮೂಡಿಸಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಗ್ರಂಥಾಲಯವೊಂದನ್ನು ತೆರೆಯಲು ಸಾಹಿತ್ಯ ಪರಿಷತ್‌ಗೆ ಸೂಕ್ತ ಕೊಠಡಿಯ ವ್ಯವಸ್ಥೆ ಮಾಡಿಕೊಡಬೇಕು. ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬರಬೇಕು ಎನ್ನುವ ಒತ್ತಾಯವನ್ನು ಮುಖ್ಯಮಂತ್ರಿಗೆ ಮಾಡಿದ್ದೇವೆ. ಈ ಎರಡು ವಿಚಾರದಲ್ಲಿ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಜಿಲ್ಲೆಯ 100 ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಗೆ ಅಗತ್ಯವಿರುವ 10 ಸಾವಿರ ಪುಸ್ತಕಗಳನ್ನು ಸಂಗ್ರಹಿಸುವ ಕೆಲಸ ಸವಾಲಿನದ್ದು. ಮಕ್ಕಳ ಅಭಿರುಚಿಗೆ ತಕ್ಕ ಪುಸ್ತಕಗಳನ್ನೇ ಆಯ್ಕೆ ಮಾಡಿ ಶಾಲೆಗಳಿಗೆ ಹಂಚಲಾಗುತ್ತದೆ ಎಂದರು.
ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥಸ್ವಾಮಿ, ಕಾದಂಬರಿಕಾರ ಎಂ.ಆರ್.ದತ್ತಾತ್ರಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್ ಇತರರಿದ್ದರು.