ಪಾಂಡವಪುರ: ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಮಹದೇಶ್ವರ, ಸಿದ್ದೇಶ್ವರರ ತಪೋಭೂಮಿಯಲ್ಲಿ ವೇದ ಮಂತ್ರಗಳ ಘೋಷದೊಂದಿಗೆ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಶಾಸ್ತ್ರೋಕ್ತವಾಗಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 24 ಜೋಡಿಗಳು ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ತಾಲೂಕಿನ ಬೇಬಿ ಬೆಟ್ಟದ ಐತಿಹಾಸಿಕ ಭಾರಿ ದನಗಳ ಜಾತ್ರಾಮಹೋತ್ಸವದ ಐದನೇ ದಿನ ಪ್ರತಿ ವರ್ಷದಂತೆ ಈ ವರ್ಷವು ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹದಲ್ಲಿ ಪಾಂಡವಪುರ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 24 ಜೋಡಿಗಳು ಸಪ್ತಪದಿ ತುಳಿದರು. ಇದಕ್ಕೂ ಮೊದಲು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕುಟುಂಬ ಸಮೇತ ಸರಳ ಸಾಮೂಹಿಕ ವಿವಾಹದಲ್ಲಿ ನವ ಜೀವನಕ್ಕೆ ಕಾಲಿಟ್ಟ ನೂತನ ವಧು ವರರಿಗೆ ಶುಭವಾಗಲಿ ಎಂದು ಗಣಪತಿ ಹಾಗೂ ಶಿವ, ಪಾರ್ವತಿಯರಿಗೆ ಪೂಜೆ ಸಲ್ಲಿಸಿದರು. ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ, ಹಾಸ್ಯ ನಟ ಚಿಕ್ಕಣ್ಣ, ಯಶಸ್ವಿ ಸೂರ್ಯ ವಧು, ವರರನ್ನು ಹರಸಿದರು.
ವಧು, ವರರಿಗೆ ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ ತಾಳಿ, ಕಾಲುಂಗರ ವಿತರಿಸಿದರು. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಧುವಿಗೆ ತಾಳಿ, ಹಾಸ್ಯ ನಟ ಚಿಕ್ಕಣ್ಣ ವರನಿಗೆ ಶರಟು, ಪಂಚೆ, ನಟ ಧನ್ವೀರ್ ಕೈಗಡಿಯಾರ, ದುಬೈ ಮೂಲದ ರೋಹಿತ್ ಅವರು ವಧುವಿಗೆ ಧಾರೆ ಸೀರೆ, ಉದ್ಯಮಿ ಮೋಹನ್‌ರಾಜ್ ಗೆಜ್ಜೆ, ಕಾಲುಂಗರವನ್ನು ತಮ್ಮ ಸ್ವತಃ ಖರ್ಚಿನಲ್ಲಿ ಉಚಿತವಾಗಿ ನೀಡಿದರು.
ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತರು ಸಾಲಗಾರರಾಗಿ ಹುಟ್ಟಿ, ಸಾಲಗಾರರಾಗಿಯೇ ಸಾಯುತ್ತಾರೆ ಎಂದರೆ ಅದಕ್ಕೆ ಸಾಲ ಮಾಡಿ ನಾವು ಮಾಡುವ ಆಡಂಬರದ ಮದುವೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಆಸ್ಪತ್ರೆ ಖರ್ಚು ಈ ಮೂರು ಅಂಶಗಳೇ ಕಾರಣ. ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಸರಳ ವಿವಾಹ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ನನ್ನ ಮತ್ತು ನನ್ನ ತಂಗಿ ಸ್ಮಿತಾಳ ಮದುವೆಯನ್ನು ಸರಳವಾಗಿ ಮಾಡಿದರು. ಆಡಂಬರದ ಮದುವೆ ಎಂಬ ಒಂದೇ ಕಾರಣಕ್ಕೆ ಸಂಬಂಧಿಗಳ ಮದುವೆಗೆ ಹೋಗುತ್ತಿರಲಿಲ್ಲ. ನಾವೆಲ್ಲರೂ ಸರಳ ವಿವಾಹವನ್ನು ಪ್ರೋತ್ಸಾಹಿಸಬೇಕು. ಜಾತ್ರಾ ಮಹೋತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸಿದವರಿಗೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ನಟ ಚಿಕ್ಕಣ್ಣ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಸುತ್ತಿರುವ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಎರಡು ವರ್ಷದಿಂದ ತಪ್ಪದೆ ಬರುತ್ತಿದ್ದೇನೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಹೃದಯವಂತಿಕೆ, ಸರಳತೆ ತುಂಬಾ ಇಷ್ಟವಾಗಿದೆ. ಕೋಟ್ಯಂತರ ರೂ.ಖರ್ಚು ಮಾಡಿ ಅದ್ಧೂರಿತನದಿಂದ ಮದುವೆ ಮಾಡಿಕೊಟ್ಟರು ಒಂದು ಮಾತು ಬಂದೇ ಬರುತ್ತದೆ. ಮದುವೆ ಹೇಗಾಯಿತು ಎಂಬುದಕ್ಕಿಂತ ದಂಪತಿ ಹೇಗೆ ಬದುಕುತ್ತೀವಿ ಎಂಬುದು ಮುಖ್ಯ. ಈ ವೇದಿಕೆಯಲ್ಲಿ ಸಾವಿರಾರು ಹಿರಿಯರ ಆಶೀರ್ವಾದದೊಂದಿಗೆ 24 ಜೋಡಿಗಳು ನವಜೀವನಕ್ಕೆ ಕಾಲಿಡುತ್ತಿದ್ದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಶಿಸಿದರು.
ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಾಳಜಿಯಿಂದ ಐತಿಹಾಸಿಕ ಭಾರಿ ದನಗಳ ಜಾತ್ರೆ ಯಶಸ್ವಿಯಾಗಿ ನೆರವೇರಿದೆ. ಜಾತ್ರೆಗೆ ಅವಶ್ಯವಿರುವ ಮೂಲಸೌಕರ್ಯ ಒದಗಿಸಿಕೊಟ್ಟಿದ್ದಾರೆ. ಶ್ರೀ ಮಠದ ವತಿಯಿಂದ ಪ್ರತಿದಿನ ಜಾತ್ರೆಗೆ ಬರುವ ಸಾವಿರಾರು ಜನರಿಗೆ ಅನ್ನ ದಾಸೋಹ ಏರ್ಪಡಿಸಲಾಗಿದೆ ಎಂದರು.
ನಟ ಧನ್ವೀರ್, ಸ್ಮಿತಾ ಪುಟ್ಟಣ್ಣಯ್ಯ, ರಾಘವ ಪ್ರಕಾಶ್, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಸಿ.ಆರ್.ರಮೇಶ್, ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್ ಮೂರ್ತಿ, ಸಿಡಿಪಿಒ ಪೂರ್ಣಿಮಾ ಇತರರು ಇದ್ದರು.