ದಸರಾ ಹಬ್ಬಕ್ಕೆ ಕುಸಿದಿದ್ದ ಸೇವಂತಿಗೆ ಹೂವಿನ ಬೆಲೆಯಲ್ಲಿ ಚೇತರಿಕೆ / ರಸ್ತೆಗೆ ಸುರಿಯುತ್ತಿದ್ದ ಚೆಂಡು ಹೂವು ೧೦೦ ರೂ.ಗಳಿಗೆ ಮಾರಾಟ / ಕೆಂಪು ರೋಜು ೪೦೦ ರೂ.ಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕಳೆದ ಒಂದು ತಿಂಗಳಿAದ ಹೂವಿನ ಬೆಲೆ ನಿರಂತರವಾಗಿ ಕುಸಿದಿದ್ದು, ದಸರಾ ಹಬ್ಬಕ್ಕೆ ಸ್ವಲ್ಪಮಟ್ಟಿಗೆ ಬೆಲೆಯಲ್ಲಿ ಚೇತರಿಕೆ ಕಂಡಿದ್ದರಾದರೂ ಸೇವಂತಿಗೆ ೨೦೦ ರೂ.ಗಳ ಗಡಿ ದಾಟಿಲ್ಲ. ರಸ್ತೆಗೆ ಸುರಿಯುತ್ತಿದ್ದ ಚೆಂಡು ಹೂವು ೧೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಕೆಂಪು ರೋಜು ೪೦೦ ರೂ.ಗಳಿಗೆ ಮಾರಾಟವಾಗುತ್ತಿದೆ. ಆದರೆ ರೈತರ ಬಳಿ ೨೦ ರೂ.ಗಳಿಂದ ೧೦೦ ರೂ.ಗಳ ತನಕ ಖರೀದಿ ಮಾಡುತ್ತಿದ್ದಾರೆ.

ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸೇವಂತಿಗೆ ಮತ್ತು ಕೆಂಪು ರೋಜು ರೈತರ ಬಳಿಯಿಂದಲೇ ೩೫೦ ರೂ.ಗಳಿಂದ ೪೦೦ ರೂ.ಗಳ ತನಕ ವ್ಯಾಪಾರಸ್ಥರು ಖರೀದಿ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಸೇವಂತಿಗೆ ೪೫೦ ರೂ.ಗಳ ತನಕ ನೀಡುತ್ತಿದ್ದರು. ಹಬ್ಬ ಮುಗಿದ ನಂತರ ದಿಢೀರನೆ ಸೇವಂತಿಗೆ, ಚೆಂಡು ಹೂವು ಬೆಲೆ ತೀವ್ರವಾಗಿ ಕುಸಿಯತೊಡಗಿತ್ತು. ಪಿತೃಪಕ್ಷಗಳ ಸಂದರ್ಭದಲ್ಲಿ ಸೇವಂತಿಗೆ ೨೦ ರೂ.ಗಳಿಗೆ, ಚೆಂಡು ಹೂವು ೧೦ ರೂ.ಗಳಿಗೆ ಮಾರಾಟವಾಗಿತ್ತು.

ತೋಟಗಳಲ್ಲಿ ಹೂವು ಬಿಡಿಸುವ ಕೂಲಿ ಬಾರದೆ ತೋಟಗಳಲ್ಲಿಯೇ ಬಿಡುವಂತಾಯಿತು. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ರಸ್ತೆಗಳಲ್ಲಿ ಸುರಿಯುವಂತೆ ಆಗಿತ್ತು. ಕಳೆದ ೨ ದಿನಗಳಿಂದ ಸ್ವಲ್ಪ ಮಟ್ಟಿಗೆ ದಸರಾ ಹಬ್ಬದ ಅಂಗವಾಗಿ ತುಸು ಏರಿಕೆ ಕಂಡಿರುವ ಸೇವಂತಿಗೆ ಮತ್ತು ಚೆಂಡು ಹೂವಿಗೆ ೧೦೦ ರಿಂದ ೨೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಗುಣಮಟ್ಟದ ಸೇವಂತಿಗೆ ರೈತರ ಬಳಿಯಿಂದ ೧೫೦ ರೂ.ಗಳಿಗೆ ವ್ಯಾಪಾರಸ್ಥರು ಖರೀದಿಸುತ್ತಿದ್ದಾರೆ. ಚೆಂಡು ಹೂವು ರೈತರಿಂದ ೫೦ ರೂ.ಗಳಿಗೆ ಖರೀದಿಸಿ ಮಾರುಕಟ್ಟೆಯಲ್ಲಿ ೧೦೦ ರೂ.ಗಳಿಗೆ ವ್ಯಾಪಾರಸ್ಥರು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ

ಇದು ಮಂಗಳವಾರ ಮಾರುಟ್ಟೆಯ ಬೆಲೆಯಾಗಿದ್ದು, ಬುಧವಾರ ಮತ್ತು ಗುರುವಾರ ಹಬ್ಬ ಇರುವುದರಿಂದ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ರೈತರು ಹೆಚ್ಚಾಗಿ ಸೇವಂತಿಗೆ ಹೂವನ್ನು ಬೆಳೆದಿರುವುದರಿಂದ ಮಾರುಕಟ್ಟೆಗೆ ಬೇಡಿಕೆಗಿಂತ ಹೆಚ್ಚಾಗಿ ಹೂವು ಬರುತ್ತಿದೆ. ಆಂಧ್ರಪ್ರದೇಶದಲ್ಲಿ ಸೇವಂತಿಗೆಯನ್ನು ಹೆಚ್ಚಾಗಿ ಬೆಳೆದಿರುವ ಕಾರಣ ಆಂಧ್ರಪ್ರದೇಶದ ಹೂವು ಜಿಲ್ಲೆಗೆ ಪ್ರವೇಶ ಮಾಡುತ್ತಿರುವುದರಿಂದ ಸೇವಂತಿಗೆ ಹೂವಿನ ಬೆಲೆ ಕುಸಿಯಲು ಕಾರಣವಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.

ಹಬ್ಬದ ಸಾಮಗ್ರಿಗಳ ಬೆಲೆ ಏರಿಕೆ :

ದಸರಾ ಹಬ್ಬಕ್ಕೆ ವಾಹನಗಳು ಸೇರಿದಂತೆ ಕಛೇರಿ, ಕಾರ್ಖಾನೆಗಳಿಗೆ ಪೂಜೆ ಮಾಡುವುದರಿಂದ ಹೂವಿನ ಜೊತೆಗೆ ಖಾರ, ಸಿಹಿ, ಬೂದು ಕುಂಬಳಕಾಯಿ ಬೆಲೆಯೂ ಏರಿಕೆಯಾಗಿದೆ. ಬೂದು ಕುಂಬಳಕಾಯಿ ಕೆ.ಜಿ ೩೫ ರಿಂದ ೪೦ ರೂ.ಗಳಿಗೆ ಮಾರಾಟವಾಗುತ್ತಿದೆ. ಸಿಹಿ ಬೂಂದಿ ೨೦೦ ರಿಂದ ೨೫೦ ರೂ.ಗಳ ತನಕ ಮಾರಾಟವಾಗುತ್ತಿದೆ. ಬಾಳೆಕಂಬಗಳು ಜೋಡಿ ರೂ.ಗಳಿಗೆ ಮಾರಾಟವಾಗುತ್ತಿದೆ. ತೆಂಗಿನಕಾಯಿ ಒಂದಕ್ಕೆ ೪೦ ರಿಂದ ೬೦ ರೂ.ಗಳ ತನಕ ಮಾರಾಟವಾಗುತ್ತಿದೆ. ಇದರ ಜೊತೆಗೆ ಖಾರಬೂಂದಿ, ವಿವಿಧ ರೀತಿಯ ಸಿಹಿ ತಿಂಡಿಗಳ ಬೆಲೆಯೂ ಏರಿಕೆಯಾಗಿದೆ.

ಚಿತ್ರ ೩೦ ಕೆ.ಎಲ್.ಆರ್. ೦೧ : ಕೋಲಾರ ಮಾರುಕಟ್ಟೆಯಲ್ಲಿ ಹೂವು ಮಾರಾಟವಾಗುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net