ದಶಕದಿಂದ ಬಾಕಿ ಇರುವ 25 ಸಾವಿರ ಕೋಟಿ ಗಣಿ ಹಣಕ್ಕೆ ಶಾಸಕರ ಪೈಪೋಟಿ!

Money 1
ಸಾಂದರ್ಭಿಕ ಚಿತ್ರ
Published on

| ಶಿವಾನಂದ ತಗಡೂರು ಬೆಂಗಳೂರು

ಅದಿರು ರಫ್ತಿಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ರಾಜ್ಯದಲ್ಲಿ ಗಣಿಗಾರಿಕೆ ಚಟುವಟಿಕೆ ಗರಿಗೆದರಲು ಭೂಮಿಕೆ ಸಿದ್ಧವಾಗುತ್ತಿದೆ. ಮತ್ತೊಂದೆಡೆ ಒಂದು ದಶಕದಿಂದ ಬಾಕಿ ಉಳಿದಿದ್ದ ಸುಮಾರು 25 ಸಾವಿರ ಕೋಟಿ ಹಣವನ್ನು ಗಣಿಗಾರಿಕೆ ಸಂತ್ರಸ್ತ ಜಿಲ್ಲೆಗಳಿಗೆ ಬಳಸಿಕೊಳ್ಳಲು ಸೂಚಿಸಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಸುಪ್ರೀಂ ಸೂಚನೆ ಹಿನ್ನೆಲೆಯಲ್ಲಿಯೇ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ಮೈನಿಂಗ್ ಎನ್ವಾರಿಮೆಂಟಲ್ ರೀಸ್ಟ್ರೋಶನ್ ಕಾರ್ಪೆರೇಷನ್ ಈಗ ಚಟುವಟಿಕೆ ಕೇಂದ್ರವಾಗಿದೆ.

ನ್ಯಾಯಮೂರ್ತಿ ಸುದರ್ಶನರೆಡ್ಡಿ ಮೇಲುಸ್ತುವಾರಿ ಯಲ್ಲಿ ಈ ಹಣ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಈ ಹಣವನ್ನು ಬಳಸಿ ಸಂತ್ರಸ್ತ 3 ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಲು ಶಾಸಕರು ಮತ್ತು ಸಚಿವರು ನಾ ಮುಂದು, ತಾ ಮುಂದು ಎಂದು ಪೈಪೋಟಿಗೆ ಇಳಿದಿದ್ದಾರೆ. ಮುಖ್ಯಮಂತ್ರಿಗಳ ಮೇಲೂ ಈ ಬಗ್ಗೆ ಒತ್ತಡ ಹೆಚ್ಚಾಗಿದೆ.

ಏನೇನು ಕಾಮಗಾರಿ?: ಗಣಿಗಾರಿಕೆಯಿಂದ ಹಾನಿ ಗೊಳಗಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಸಮುದಾಯ ಭವನಗಳು, ಶಾಲೆಗಳ ಅಭಿವೃದ್ಧಿ ಸೇರಿ ಮೂಲ ಸೌಕರ್ಯ ಕಲ್ಪಿಸಲು ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಗಣಿಗಾರಿಕೆಯಿಂದ ಬಳಲಿರುವ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಮಾತ್ರ ಈ ಹಣವನ್ನು ಬಳಕೆ ಮಾಡಲು ಷರತ್ತು ವಿಧಿಸಲಾಗಿದೆ.

ಗಣಿಗಾರಿಕೆಯ 25 ಸಾವಿರ ಕೋಟಿ ಹಣವನ್ನು ಬಳಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆದ ಜಿಲ್ಲೆಗಳಲ್ಲಿ ಕ್ರೀಯಾಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಮೂಲ ಸೌಕರ್ಯಗಳಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುವುದು. | ಹಾಲಪ್ಪ ಆಚಾರ್ ಗಣಿ ಸಚಿವ

ರಸ್ತೆಗಳ ಅಭಿವೃದ್ಧಿಗೂ ಆದ್ಯತೆ: ಗಣಿಗಾರಿಕೆ ನಡೆಯುವ ಸಂದರ್ಭದಲ್ಲಿ ಅದಿರನ್ನು ಬಂದರಿಗೆ ಸಾಗಿಸಲು ಬಳಸುತ್ತಿದ್ದ ರಸ್ತೆಗಳು ಹಾಳಾಗಿ ಹೋಗಿದ್ದು, ಅದಕ್ಕೂ ಈ ಹಣವನ್ನು ನೀಡಬೇಕು ಎನ್ನುವುದು ರಾಜ್ಯ ಸರ್ಕಾರದ ಇರಾದೆಯಾಗಿದೆ. ಗಣಿ ಲಾರಿಗಳು ಓಡಾಡಿದ ಕಾರಣಕ್ಕೆ ರಸ್ತೆಗಳು ಹಾಳಾಗಿ, ಆ ಸಂದರ್ಭದಲ್ಲಿ ಪರಿಸರವೂ ಮಾಲಿನ್ಯಗೊಂಡಿತ್ತು ಎನ್ನುವುದು ಜನರ ದೂರು.

ನವಲಿ ಜಲಾಶಯಕ್ಕೂ ಹಣ: ತುಂಗಭದ್ರ ಜಲಾಶಯದಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆ ಯಾಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ 1 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಗಣಿಯ 25 ಸಾವಿರ ಕೋಟಿ ಹಣದಲ್ಲಿ 1 ಸಾವಿರ ಕೋಟಿ ಹಣವನ್ನು ಜಲಾಶಯಕ್ಕೆ ಬಳಕೆ ಮಾಡಿಕೊಳ್ಳಲು ಸರ್ಕಾರ ಕಸರತ್ತು ನಡೆಸುತ್ತಿದೆ. ಆದರೆ, ಇದಕ್ಕೆ ಸುಪ್ರೀಂ ಕೋರ್ಟ್​ನಲ್ಲಿ ಒಪ್ಪಿಗೆ ಅಗತ್ಯ ಎಂದು ಹೇಳಲಾಗುತ್ತಿದೆ.

ಕಾನೂನು, ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಪ್ರಕೃತಿಯ ಒಡಲಿನಲ್ಲಿರುವ ಅದಿರನ್ನು ತೆಗೆದು ಲೂಟಿ ಮಾಡುತ್ತಿರುವ ದೂರುಗಳ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ದಂಡ ವಿಧಿಸಿದ್ದು ಹಾಗೂ ಅಕ್ರಮ ಗಣಿಗಾರಿಕೆ ಅದರಿನ ಹರಾಜಿನಲ್ಲಿ ಬಂದ ಹಣ ಸೇರಿ ಒಟ್ಟು 23 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. ನಂತರ ಬಂದ ಹಣ ಹಾಗೂ 10 ವರ್ಷದ ಬಡ್ಡಿ ಸೇರಿ ಈಗ 25 ಸಾವಿರ ಕೋಟಿ ರೂ. ಸರ್ಕಾರದ ಬಳಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net