ದಲಿತ ಮಹಿಳೆಗೆ ರಕ್ಷಣೆ ನೀಡಿ

ಹುಣಸೂರು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಅವರಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ನಿಂಗರಾಜ ಮಲ್ಲಾಡಿ, ದೇವೇಂದ್ರ, ಪೂವಮ್ಮ, ಬಂಗಾರು ಇತರರಿದ್ದರು.
HUN-SEP-12-3(DSS MEMORENDUM)
Published on

ಹುಣಸೂರು: ಎಚ್.ಡಿ.ಕೋಟೆ ತಾಲೂಕಿನ ಪಡುಕೋಟೆ ಗ್ರಾಮದ ಭೂಹಗರಣಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆ ಪೂವಮ್ಮಳಿಗೆ ಜಿಲ್ಲಾಡಳಿತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಅವರಿಗೆ ಮನವಿ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಎಚ್.ಡಿ. ಕೋಟೆ ತಾಲೂಕಿನ ಕಸಬಾ ಹೋಬಳಿ ಪಡುಕೋಟೆ ಸರ್ವೇ ನಂ.53 ರಲ್ಲಿ 4.40 ಗುಂಟೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಸಾಗುವಳಿ ಪತ್ರವನ್ನು ಮುಜರಾಯಿ ಇಲಾಖೆಯ ಅಧಿಕಾರಿಯೊಬ್ಬರ ಪತ್ನಿಗೆ ಕೊಡಿಸಲು ಕಂದಾಯ ಇಲಾಖೆ ಅಧಿಕಾರಿ ವರ್ಗ ಪ್ರಯತ್ನಿಸಿದೆ ಎಂದು ಸ್ಥಳೀಯ ಗ್ರಾಮದ ರೈತರಾದ ರವಿ ಮತ್ತು ಮಾದಮ್ಮ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರು. ಅದರಂತೆ ಹುಣಸೂರು ಉಪವಿಭಾಗಾಧಿಕಾರಿ ಸಮಗ್ರ ತನಿಖೆ ನಡೆಸಿ, ‘ಈ ಅಧಿಕಾರಿಗಳು ಮಾಡುತ್ತಿರುವ ಅಕ್ರಮಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಕಾನೂನು ಕ್ರಮ ಜರುಗಿಸುವಂತೆ’ ಮೈಸೂರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಆದರೆ ಎಚ್.ಡಿ.ಕೋಟೆ ತಾಲೂಕಿನ ಕಂದಾಯ ಅಧಿಕಾರಿಗಳು ಪೂವಮ್ಮರಿಗೆ ಸೇರಿದ ಭೂಮಿಗೆ ಸಂಬಂಧಿಸಿದ ಮೂಲ ಕಡತವನ್ನು ಕಣ್ಮರೆ ಮಾಡಿದ್ದಾರೆ. ಅಲ್ಲದೇ, ಪೂವಮ್ಮ ಮತ್ತು ಕುಟುಂಬದವರಿಗೆ ಬಾಡಿಗೆ ಗೂಂಡಾಗಳಿಂದ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಭಾಗದಲ್ಲಿ ನೂರಾರು ಎಕರೆ ಭೂಮಿ ಸರ್ಕಾರಿ ಜಮೀನಿದ್ದು, ಅಧಿಕಾರಿಗಳು ಅಕ್ರಮವಾಗಿ ಸಾರಾಯಿ ಮಾರಾಟಗಾರನಿಗೆ ನಕಲಿ ದಾಖಲೆ ಮೂಲಕ ಮಾಲೀಕತ್ವ ನೀಡಲು ಮುಂದಾಗಿರುವ ಮಾಹಿತಿ ಇದೆ. ಕೂಡಲೇ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ದಲಿತ ಮಹಿಳೆ ಪೂವಮ್ಮ ಹಾಗೂ ಅವರ ಆಸ್ತಿಗೆ ರಕ್ಷಣೆ ನೀಡಬೇಕು. ಭೂಹಗರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ, ಘಟನೆ ಬಗ್ಗೆ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಲಿದ್ದಾರೆಂದರು. ಮುಖಂಡರಾದ ದೇವೇಂದ್ರ ಕುಳುವಾಡಿ, ಬಲ್ಲೇನಹಳ್ಳಿ ಕೆಂಪರಾಜು, ಅಗ್ರಹಾರ ಸಾಕಯ್ಯ, ಜೆ.ಮಹದೇವ ಕೆ.ಎಂ.ವಾಡಿ, ಪಡುವಕೋಟೆಯ ನಾಗರಾಜು, ಪೂವಮ್ಮ, ಬಂಗಾರು, ದಲಿತ ಮಹಿಳಾ ಒಕ್ಕೂಟದ ಲಕ್ಷ್ಮೀ, ಕಾಳಮ್ಮ, ಕಮಲಮ್ಮ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net