

ಇಷ್ಟು ದಿನ ತೇಜಸ್ವಿ ಅವರ ಮಾಯಾಲೋಕ ಕೃತಿ ಓದಲು ಕನ್ನಡದಲ್ಲಿ ಲಭ್ಯವಿತ್ತು. ಇದೀಗ ಇಂಗ್ಲಿಷ್ ಅವತರಣಿಕೆ ಬಂದಿದ್ದು, ಓದುಗರು ಆಂಗ್ಲ ಭಾಷೆಯಲ್ಲೂ ಓದಬಹುದು ಎಂದು ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ ತಿಳಿಸಿದರು.
ವಿಜಯನಗರದ 4ನೇ ಹಂತದಲ್ಲಿರುವ ಕಲ್ಪ ಕ್ಷೇತ್ರ ಸಭಾಂಗಣದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಕೃಷ್ಣಮೂರ್ತಿ ಚಂದರ್ ಅವರು ಅನುವಾದ ಮಾಡಿರುವ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಲೋಕ’ ಕೃತಿಯ ಇಂಗ್ಲಿಷ್ ಅವತರಣಿಕೆ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕೃಷ್ಣಮೂರ್ತಿ ಚಂದರ್ ಅವರು ಬಹಳ ಚೆನ್ನಾಗಿ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಅರ್ಥವಾಗದ ಕೆಲವು ಕಡೆ ಸಮಾನಾರ್ಥಕ ಪದಗಳನ್ನು ಲೇಖಕರು ಸೂಚಿಸಿದ್ದಾರೆ ಎಂದು ಹೇಳಿದರು.
ಒಮ್ಮೆ ಸಂತೆಗೆ ಹೋಗಿದ್ದ ತೇಜಸ್ವಿ ಕೋಳಿ ಮರಿಗೆ ಹೆಚ್ಚು ಬೆಲೆ ಹೇಳಿದರೆಂದು ಪಕ್ಕದಲ್ಲೇ ಇದ್ದ ಬಾತುಕೋಳಿಯನ್ನು ಅದರರ್ಧ ಬೆಲೆಗೆ ಕೊಂಡು ತಂದಿದ್ದ. ಮನೆಯಲ್ಲಿ ಅಮ್ಮ, ಏಕೆ ತಂದೆ ಎಂದು ಕೇಳಿದಾಗ ಕೋಳಿ ಮರಿಗೆ ಜಾಸ್ತಿ ಬೆಲೆ ಹೇಳಿದರು. ಅದಕ್ಕಿಂತ ದೊಡ್ಡದಾಗಿದ್ದ ಬಾತುಕೋಳಿಗೆ ಕಡಿಮೆ ಬೆಲೆ ಇತ್ತು. ಅದಕ್ಕೆ ತಂದೆ ಎಂದಿದ್ದ. ಇದನ್ನು ಕೇಳಿ ಮನೆಯಲ್ಲಿ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದರು ಎಂದು ಹಳೇ ದಿನಗಳನ್ನು ಮೆಲುಕು ಹಾಕಿದರು.
ಮೈಸೂರು ಲಿಟರರಿ ಅಸೋಸಿಯೇಷನ್ ಅಧ್ಯಕ್ಷ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿ, ಡಾ.ಬಿ.ಗೋಪಾಲ್‌ಸಿಂಗ್, ಡಾ.ಜಗನ್ನಾಥ್, ನಳಿನಿ ಚಂದರ್, ಅನರ್ಘ್ಯ, ಮೀರಾ ಸೋಮನ್, ಮೇಘ ಸವನೂರ ಸೇರಿದಂತೆ ಇತರರಿದ್ದರು. ಅನುವಾದಕ ಕೃಷ್ಣಮೂರ್ತಿ ಚಂದರ್ ಪುಸ್ತಕದ ಮೊದಲ ಪ್ರತಿಯನ್ನು ಕುವೆಂಪು ಮಗಳು ತಾರಿಣಿ ಚಿದಾನಂದ ಅವರಿಗೆ ನೀಡಿದರು.