ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಡಾ|| ಪ್ರವೀಣ್ ಪಿ.ಬಾಗೇವಾಡಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿಗಳಲ್ಲಿ "ತೆರಿಗೆ ಪಾವತಿಸಿ ನಿಮ್ಮ ಜವಾಬ್ದಾರಿ ಚಲಾಯಿಸಿ" ಘೋಷಣೆಯೊಂದಿಗೆ ಬಾಕಿ ಸಂಗ್ರಹಕ್ಕೆ ಈ ಬಾರಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅ. ೧೫ ರಿಂದ ನ. ೧೪ ರವರೆಗೆ ಅಭಿಯಾನದ ಮೂಲಕ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲೂ ಶೇ. ೧೦೦ ರಷ್ಟು ತೆರಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಜಿಲ್ಲಾ ಪಂಚಾಯತಿಯು ವಿನೂತನ ಪ್ರಯತ್ನಗಳನ್ನು ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ೧೫೪ ಗ್ರಾಮ ಪಂಚಾಯಿತಿಗಳಿದ್ದು, ಗ್ರಾಮೀಣ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತೆರಿಗೆ ಪಾವತಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಆಸ್ತಿ ತೆರಿಗೆ ಸಂಗ್ರಹ ಕುರಿತು ಜಾಗೃತಿ ಮೂಡಿಸಿ, ಸಾರ್ವಜನಿಕರಿಂದ ತೆರಿಗೆ ಪಾವತಿಗೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವೀಣ್ ಪಿ ಬಾಗೇವಾಡಿ ಸೂಚಿಸಿದ್ದಾರೆ.
ಅಭಿಯಾನದ ಉದ್ದೇಶಗಳು:
ಗ್ರಾಮ ಪಂಚಾಯತಿಗಳು ತಮ್ಮ ಬಾಕಿ ಇರುವ ತೆರಿಗೆಗಳನ್ನು ಸಂಗ್ರಹಿಸುವ ಮೂಲಕ ಆದಾಯವನ್ನು ಹೆಚ್ಚಿಸಿ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವುದು. ಅದರೊಂದಿಗೆ ಸ್ವಂತ ಸಂಪನ್ಮೂಲದಿAದ ಮೂಲ ಸೌಕರ್ಯಗಳ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವುದು ಅಭಿಯಾನದ ಮುಖ್ಯ ಉದ್ದೇಶ. ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ಕರವಸೂಲಿಗಾರರು, ಜಲಗಾರರು ಭಾಗಿಯಾಗುತ್ತಿದ್ದು, ಗ್ರಾಮ ಪಂಚಾಯತಿ ಜನಪ್ರತಿ ನಿಧಿಗಳ ಸಹಕಾರದಿಂದ ಅಭಿಯಾನ ಆರಂಭಿಸಲಾಗಿದ್ದು. ತೆರಿಗೆ ಬಾಕಿ ಉಳಿಸಿಕೊಂಡಿರುವ ಮನೆಗಳು, ನಿವೇಶನ, ವಾಣಿಜ್ಯ ಮಳಿಗೆಗಳು, ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಿ, ಸ್ವಯಂ ಪ್ರೇರಿತರಾಗಿ ತಮ್ಮ ಆಸ್ತಿಯ ಕಂದಾಯ ಕಟ್ಟಲು ಪ್ರೇರೆಪಿಸಲಾಗುತ್ತಿದೆ.
ಮಹಿಳಾ ಸ್ವಸಹಾಯ ಸಂಘಗಳಿAದ ತೆರಿಗೆ ಸಂಗ್ರಹಕ್ಕೆ ಸಹಕಾರ:
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಿAದ ತೆರಿಗೆ ಸಂಗ್ರಹಕ್ಕೆ ಸಹಕಾರ ಪಡೆಯುವ ವಿನೂತನ ಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಂದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಾಮರ್ಥ್ಯವನ್ನು ಬಳಸಿಕೊಂಡು, ಕರ ವಸೂಲಾತಿಯ ವೇಗ ಹೆಚ್ಚಿಸಲು ಕ್ರಮ ವಹಿಸಲಾಗಿದ್ದು, ಎಂ.ಬಿ.ಕೆ ಸ್ವಸಹಾಯ ಸಂಘ ಸೇರಿದಂತೆ ವಿವಿಧ ಮಹಿಳಾ ಸಂಘಗಳ ಸದಸ್ಯರು ತಮ್ಮ ಸ್ವತ್ತುಗಳ ತೆರಿಗೆಯನ್ನು ಕಟ್ಟಲು ಪ್ರೇರೆಪಿಸಲಾಗುತ್ತಿದೆ.
ತೆರಿಗೆ ಪಾವತಿ ಮಾಡಲು ಡಿಜಿಟಲ್ ಸ್ಪರ್ಷ:
ಸಾರ್ವಜನಿಕರಿಗಾಗಿ ತೆರಿಗೆ ಪಾವತಿ ಮಾಡಲು ಡಿಜಿಟಲ್ ಸ್ಪರ್ಷ ನೀಡಿದ್ದಲ್ಲದೆ ಇನ್ನಷ್ಟು ಸರಳೀಕರಣಗೊಳಿಸಿದೆ. ಗ್ರಾಮ ಪಂಚಾಯತಿ ಸಿಬ್ಬಂದಿ ಪಿಓಎಸ್ ಯಂತ್ರದೊAದಿಗೆ ಮನೆಮನೆಗೆ ಬಂದು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, ಯುಪಿಐ ಮೂಲಕ ಪಾವತಿ ಪಡೆದು ಸ್ಥಳದಲ್ಲಿಯೇ ಕಂಪ್ಯೂಟರೀಕೃತ ರಶೀದಿ ನೀಡಲಿದ್ಧಾರೆ.
ಅಷ್ಟೇ ಅಲ್ಲದೆ ತಮ್ಮ ಆಸ್ತಿ ಸಂಖ್ಯೆಯನ್ನು ಬಳಸಿ ಡಿಜಿಟಲ್ ಪೇಮೆಂಟ್ ವೇದಿಕೆಗಳಾದ ಭಾರತ್ ಪೇ, ಫೋನ್ ಪೇ, ಗೂಗಲ್ ಪೇ, ಪೇ-ಟಿಎಮ್ ಸೇರಿದಂತೆ ಇತರೆ ಮಾದ್ಯಮಗಳ ಮೂಲಕವೂ ನಾಗರೀಕರು ತೆರಿಗೆ ಪಾವತಿ ಮಾಡಬಹುದು.
ಕಳೆದ ವರ್ಷಕ್ಕಿಂತ ಹೆಚ್ಚು ಗುರಿ:
ತೆರಿಗೆ ಪಾವತಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಂಗ್ರವಾಗುವ ಹಣ ಗ್ರಾಮಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು. ಅಭಿಯಾನದ ಮೂಲಕ ಕಳೆದ ವರ್ಷಕ್ಕಿಂತ ಈವರ್ಷ ಹೆಚ್ಚಿನ ಗುರಿಸಾಧಿಸುವ ನಿರೀಕ್ಷೆ ಇದೆ ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವೀಣ್ ಪಿ ಬಾಗೇವಾಡಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್ ಅವರು ೨೦೨೪ ಮತ್ತು ೨೦೨೫ ನೇ ಸಾಲಿನಲ್ಲಿ ಸುಮಾರು ಜಿಲ್ಲೆಯಾದ್ಯಂತ ೪೯ ಕೋಟಿ ತೆರಿಗೆ ಸಂಗ್ರಹವಾಗಿದ್ದು ಶೇ ೮೭.೫೭ ರಷ್ಟು ಗುರಿ ಸಾಧಿಸಲಾಗಿತ್ತು. ಅದೇ ರೀತಿ ೨೦೨೫ ಮತ್ತು ೨೬ ನೇ ಸಾಲಿನಲ್ಲಿ ಸುಮಾರು ೫೦.೪೫ ಕೋಟಿ ರೂ ಗುರಿ ಹೊಂದಿದ್ದು, ಈಗಾಗಲೇ ೨೩ ಕೋಟಿ ತೆರಿಗೆ ಸಂಗ್ರಹವಾಗಿದೆ. ಅಭಿಯಾನದ ಮೂಲಕ ಶೇ ೧೦೦ ರಷ್ಟು ಗುರಿ ಸಾಧಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರ ೨೭ ಕೆ.ಎಲ್.ಆರ್. ೦೧ ಡಾ|| ಪ್ರವೀಣ್ ಪಿ ಬಾಗೇವಾಡಿ ಭಾವಚಿತ್ರ.