

ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನ ನಮಗೆ ತೃಪ್ತಿ ತಂದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರ ವಿರುದ್ಧ ಕುಟುಕಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತು ಚರ್ಚೆ ಆಗಬೇಕಿತ್ತು. ಆದರೆ, ಭ್ರಷ್ಟಾಚಾರ ತೇಪೆ ಹಚ್ಚುವ ಹಾಗೂ ಅದನ್ನು ಮುಚ್ಚಿಕೊಳ್ಳುವ ಕೆಲಸ ಮಾಡಿದರು. ಸಮಸ್ಯೆ ಬಗ್ಗೆ ಚರ್ಚೆ ಆಗಲಿಲ್ಲ. ಕಿತ್ತೂರು ಕರ್ನಾಟಕ ಸಮಗ್ರ ಕರ್ನಾಟಕ ಕುರಿತು ಚರ್ಚೆ ಮಾಡಲಿಲ್ಲ ಎಂದರು.
ಕೆಐಡಿಬಿಯಲ್ಲಿ ಭ್ರಷ್ಟಾಚಾರ ಆಗಿದೆ. ಅದನ್ನು ತನಿಖೆ ಮಾಡುತ್ತಿಲ್ಲ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ. ಖಾಲಿ ಜಾಗ ಅವರ ಬುಟ್ಟಿಗೆ ಹಾಕಿದ್ದಾರೆ. ರಾಯಚೂರು ಥರ್ಮಲ್ ಪವರ್ ಪ್ಲಾಂಟ್ ಬಣ್ಣ ಬಳಿಯಲು 120 ಕೋಟಿ ರೂಪಾಯಿ ನಿಗದಿ ಮಾಡಿದ್ದಾರೆ. ಈ ಕಾರ್ಯಕ್ಕೆ 120 ಕೋಟಿ ರೂ. ಬೇಕಾ? ವಾಲ್ಮೀಕಿ, ಮುಡಾ ಹಗರಣ ಹಾಗೂ ಇತರ ಹಗರಣ ಮುಚ್ಚಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಗ್ಯಾರಂಟಿ ಬಿಟ್ಟು ಸರ್ಕಾರದ ಬಳಿ ಬೇರೆ ಮಾತಿಲ್ಲ. ಗ್ಯಾರಂಟಿಗಳೇ ಶಾಶ್ವತವಲ್ಲ. ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಮಾಡಬೇಕು. ಗ್ಯಾರಂಟಿಯಲ್ಲೇ ಸರ್ಕಾರ ಮುಳುಗಿದರೆ ಹೇಗೆ ಎಂದು ವಾಗ್ದಾಳಿ ನಡೆಸಿದರು. ರೈತರ ಸಮಸ್ಯೆಗಳಿವೆ. ನೀರಾವರಿ ಯೋಜನೆಗಳ ಹಾಗೂ ಇತರ ಸಮಸ್ಯೆಗಳಿವೆ. ಅಭಿವೃದ್ಧಿಗಳಿಗಾಗಿ ಸರ್ಕಾರ ಈಗ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರ ಜನ್ಮ ದಿನಾಚರಣೆ ಹೆಸರಲ್ಲಿ ಯಡಿಯೂರಪ್ಪೋತ್ಸವ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನ್ಮ ದಿನಾಚರಣೆ ಅವರಿಗೆ ಸಂಬಂಧಿಸಿದ್ದು. ಅಭಿಮಾನಿಗಳು ಮಾಡಿದರೆ ಮಾಡಲಿ. ಅದು ಅವರ ಇಚ್ಛೆ. ಇದು ಬಲ ಪ್ರದರ್ಶನ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.