ತಾರತಮ್ಯ ನಿವಾರಣೆಗೆ ಶಿಕ್ಷಣದಿಂದ ಮಾತ್ರ ಸಾಧ್ಯ / ಸ್ಥಾನಮಾನಕ್ಕೆ ಹೋರಾಟ ಅನಿವಾರ್ಯವಾಗಿದೆ / ಸತೀಶ್ ಜಾರಕಿಹೊಳಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಸಮಾಜದಲ್ಲಿನ ತಾರತಮ್ಯ ನಿವಾರಣೆಗೆ ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು ಪ್ರಸ್ತುತ ಸರ್ಕಾರಿ ಉದ್ಯೋಗ, ರಾಜಕೀಯ ಸ್ಥಾನಮಾನಗಳಿಗೆ ಹೋರಾಟದ ಅನಿವಾರ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ವಾಲ್ಮೀಕಿ ನಾಯಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ದಿವಂಗತ ಸಿ.ಆರ್ ಮಾಲಾ ಅವರ ಜ್ಞಾಪಕಾರ್ಥವಾಗಿ ೨೦೨೩-೨೪ ನೇ ಸಾಲಿನ ಎಸ್ಸಿ, ಎಸ್ಟಿ, ಹಾಗೂ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸೌಲಭ್ಯಗಳಿಗಾಗಿ ಸಂವಿಧಾನ ಒಂದಿಷ್ಟು ಅವಕಾಶವನ್ನು ನೀಡಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜೊತೆಗೆ ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಅರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ಸಮುದಾಯವನ್ನು ತಂದು ನಿಲ್ಲಿಸಬೇಕು. ಇದಕ್ಕೆ ನಮ್ಮಲ್ಲಿನ ವೈಮನಸ್ಸು ಬಿಟ್ಟು ಸಂಘಟಿತರಾಗಬೇಕು ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಜನಪರವಾದ ಯೋಜನೆಗಳನ್ನು ರೂಪಿಸಿದ್ದಾರೆ. ಜೊತೆಗೆ ವಿಧ್ಯಾರ್ಥಿಗಳ ಉತ್ಸಾಹ ಮತ್ತು ಹುಮ್ಮಸ್ಸು ಹೆಚ್ಚಾಗಲು ಇಂತಹ ಪೋತ್ಸಾಹದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಬೇಕು. ಅವಕಾಶಗಳು ಯಾವಾಗಲೂ ಸಿಗಲ್ಲ. ಸಿಕ್ಕಾಗ ಸದುಪಯೋಗ ಪಡಿಸಿಕೊಳ್ಳಬೇಕು. ವಾಲ್ಮೀಕಿ ಸಮುದಾಯವು ಬೇರೆ ಬೇರೆ ಸಮುದಾಯಗಳನ್ನು ಗೌರವಯುತವಾಗಿ ಕಾಣಬೇಕು ಮತ್ತು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದರು.

ಮುಖ್ಯಮAತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಮನುಷ್ಯನಿಗೆ ಅವಶ್ಯಕತೆ ಇರುವುದನ್ನು ಕೇಳದೇ ಪ್ರಶ್ನೆ ಮಾಡದೇ ಪಡೆಯಲು ಸಾಧ್ಯವಿಲ್ಲ. ಅವಕಾಶಗಳಿಗಾಗಿ ಕೆಲವು ಸಂದರ್ಭದಲ್ಲಿ ಹೋರಾಟವು ಮಾಡಬೇಕು. ಸಿಎಂ ಸಿದ್ದರಾಮಯ್ಯ ಎಲ್ಲಾ ಜಾತಿ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ಹೋಗತ್ತಾ ಇದ್ದಾರೆ. ಅವರ ವಿರುದ್ಧವೂ ಸಂಚು ನಡೆಯುತ್ತಿದೆ ಎಂದರು.

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾ ಸ್ವಾಮೀಜಿ ಮಾತನಾಡಿ, ಜಾತಿ ಎಂಬ ಕಾರಣಗಳಿಂದಾಗಿ ಸಮಾಜದಲ್ಲಿ ತಾರತಮ್ಯದ ಮನೋಭಾವನೆಯಿಂದ ನೋಡುವಂತಾಗಿದೆ. ಸಮುದಾಯವನ್ನು ಸ್ವಾಭಿಮಾನದಿಂದ ಬದುಕುವ ವಾತಾವರಣವನ್ನು ಸೃಷ್ಟಿಸಿಕೊಳ್ಳಬೇಕು. ವಿಧ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪೋತ್ಸಾಹಿಸಬೇಕು ಎಂದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಯಾವುದೇ ಸಮಾಜಕ್ಕೆ ಒಳ್ಳೆಯದು ಬಯಸುವುದಾದರೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಇತರೆ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಬೇಕು. ಎಲ್ಲರೂ ಒಂದೇ ಎಂಬುದನ್ನು ಅರ್ಥಮಾಡಿಕೊಂಡು ಒಗ್ಗೂಡಿಸಿಕೊಂಡು ಕಾರ್ಯಕ್ರಮಗಳನ್ನು ಸಮಾಜದಲ್ಲಿ ನಡೆಸಬೇಕು. ಹಿಂದೆ ಇದೇ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆಯಲ್ಲೂ ಸಹ ರಾಜಕೀಯ ಮಾಡಿದರು. ಆದರೆ ಇವತ್ತು ಭವನದಿಂದ ಎಲ್ಲರಿಗೂ ಅನುಕೂಲವಾಗುತ್ತಿದೆ ಪ್ರತಿಯೊಬ್ಬರೂ ಅಂಬೇಡ್ಕರ್ ವಾಲ್ಮೀಕಿ ಕುವೆಂಪು ಅವರ ಆಶಯಗಳನ್ನು ಮೈಗೂಡಿಸಿಕೊಂಡು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಎಂದರು.

ನಗರಸಭೆ ಸದಸ್ಯ ಎನ್ ಅಂಬರೀಶ್ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಎಸ್ಸಿ ಎಸ್ಟಿ ಹಾಗೂ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳನ್ನು ಅಭಿನಂದನೆ ಸಲ್ಲಿಸುವ ಕೆಲಸವನ್ನು ಮಾಡಿದ್ದೇವೆ. ಇವತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಾಗ ಸಮುದಾಯಗಳು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸುಮಾರು ೮೦ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಎಸಿ ಡಾ.ಮೈತ್ರಿ, ತಹಶಿಲ್ದಾರ್ ಹರ್ಷವರ್ಧನ್, ಕುಡಾ ಅಧ್ಯಕ್ಷ ಮಹಮ್ಮದ್ ಅನೀಫ್, ಕೋಚಿಮುಲ್ ನಿರ್ದೇಶಕ ಷಂಷೀರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾದ ಅಶೋಕ್, ಮುರಳಿ, ದಲಿತ ಮುಖಂಡ ಟಿ.ವಿಜಿಕುಮಾರ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಬಾಲಗೋವಿಂದ್, ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್ ಮುಂತಾದವರು ಇದ್ದರು.

ಚಿತ್ರ ೨೭ ಕೆ.ಎಲ್.ಆರ್. ೦೭ : ದಿವಂಗತ ಸಿ.ಆರ್ ಮಾಲಾ ಅವರ ಜ್ಞಾಪಕಾರ್ಥವಾಗಿ ೨೦೨೩-೨೪ ನೇ ಸಾಲಿನ ಎಸ್ಸಿ, ಎಸ್ಟಿ, ಹಾಗೂ ಅಲ್ಪಸಂಖ್ಯಾತರ ವಿಧ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net