

ಬಾಳೆಹೊನ್ನೂರು: ಸೂಕ್ತ ತಳಿ, ಹವಾಮಾನ, ಮಣ್ಣಿನ ಗುಣ ಧರ್ಮವನ್ನು ಅರಿತು ಕಾಳುಮೆಣಸು ಮತ್ತು ಕಾಫಿ ಗಿಡಗಳನ್ನು ತೋಟದಲ್ಲಿ ನಾಟಿ ಮಾಡಬೇಕು ಎಂದು ಇಂಡಿಯನ್ ಪೆಪ್ಪರ್ ಲೀಗ್ ಸಂಸ್ಥೆಯ ವೈಜ್ಞಾನಿಕ ನಿರ್ದೇಶಕ ಸುನೀಲ್ ತಾಮಗಾಳೆ ಹೇಳಿದರು.
ಹೂಗೆಬೈಲಿನ ಸಸ್ಯಮಿತ್ರ ನರ್ಸರಿಯಲ್ಲಿ ಕಾಳುಮೆಣಸು ಮತ್ತು ಕಾಫಿ ಬೆಳೆಗಳ ನರ್ಸರಿ, ಆರೈಕೆ ಕುರಿತು ಆಯೋಜಿಸಿದ್ದ ಪ್ರಾತ್ಯಕ್ಷಿತೆಯಲ್ಲಿ ಮಾತನಾಡಿ, ರೈತರು ಒಂದೇ ಬಾರಿಗೆ 15-20 ಸಾವಿರ ಕಾಳುಮೆಣಸಿನ ಗಿಡಗಳನ್ನು ತೋಟದಲ್ಲಿ ನಾಟಿ ಮಾಡಬಾರದು. ಇದರಿಂದ ಎಲ್ಲ ಗಿಡಗಳನ್ನು ಒಂದೇ ಬಾರಿ ಮೇಲ್ವಿಚಾರಣೆ ನಡೆಸುವುದು ಕಷ್ಟವಾಗುತ್ತದೆ. ಆರಂಭಿಕ ಹಂತದಲ್ಲಿ ಪ್ರತಿ ವರ್ಷ 2,000 ಗಿಡಗಳನ್ನು ನಾಟಿ ಮಾಡಿದಲ್ಲಿ ಉತ್ತಮವಾಗಿ ಆರೈಕೆ ಮಾಡಿ ಹೆಚ್ಚು ಸಲು ಪಡೆಯಬಹುದು ಎಂದು ತಿಳಿಸಿದರು.
ಕಾಳುಮೆಣಸು ನೆಟ್ಟ ನಂತರ ಕಾಂಪೋಸ್ಟ್ ಗೊಬ್ಬರ ನೀಡಿದಲ್ಲಿ ಮಣ್ಣಿನಲ್ಲಿ ಎರೆಹುಳು ಸಂಖ್ಯೆ ಹೆಚ್ಚಾಗಿ ಲವತ್ತತೆ ವೃದ್ಧಿಯಾಗುತ್ತದೆ. ಉತ್ತಮವಾಗಿ ಬೆಳೆದ ಬಳ್ಳಿಯಿಂದ ವರ್ಷಕ್ಕೆ 80ರಿಂದ 100 ಕೆಜಿ ಹಸಿ ಕಾಳುಮೆಣಸು ಕೊಯ್ದ ಉದಾಹರಣೆ ಇದೆ. ಕಾಳುಮೆಣಸಿನ ಣಿಯೂರು ತಳಿಗೆ ರೋಗಗಳು ಹೆಚ್ಚು. ಆದರೆ ಕಾಲಕಾಲಕ್ಕೆ ಸರಿಯಾಗಿ ಔಷಧ ಸಿಂಪಡಣೆ ಮಾಡಿದಲ್ಲಿ ಉತ್ತಮ ಇಳುವರಿಗಳಿಸಲು ಸಾಧ್ಯ ಎಂದರು.
ಸಸ್ಯಮಿತ್ರ ನರ್ಸರಿ ಮಾಲೀಕ ಶಶಿಧರ ಸಕ್ಕರೆಮಕ್ಕಿ ಮಾತನಾಡಿ, ನರ್ಸರಿಯಲ್ಲಿ ಬುಟ್ಟಿಗೆ ಮಣ್ಣು ತುಂಬಿಸುವ ವೇಳೆ ಎಚ್ಚರ ಅಗತ್ಯ. ಸಂಪೂರ್ಣ ಮೃದು ಮಣ್ಣನ್ನು ಬುಟ್ಟಿಗಳಿಗೆ ತುಂಬಿಸಬಾರದು. ಮರಳು ಮಿಶ್ರಿತ ಮಣ್ಣು ತುಂಬಿದಲ್ಲಿ ಸಸಿಗಳ ಬೇರು ಆಳವಾಗಿ ಇಳಿಯಲು ಸಹಾಯವಾಗುತ್ತದೆ ಎಂದರು.
ಐಪಿಎಲ್ ಉಪಾಧ್ಯಕ್ಷ ಕೆ.ಎಸ್.ಸತ್ಯಪ್ರಕಾಶ್ ಕೆಳಕೊಡಿಗೆ ಕಾಳುಮೆಣಸು, ಕಾಫಿ ಕುರಿತು ಮಾಹಿತಿ ನೀಡಿದರು. ರೈತರೊಂದಿಗೆ ನರ್ಸರಿಯಲ್ಲಿ ಗಿಡಗಳ ಆರೈಕೆ ಹಾಗೂ ಕಾಫಿ, ಕಾಳುಮೆಣಸು ಕುರಿತು ಸಂವಾದ ನಡೆಯಿತು. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ರೈತರು ಸಂವಾದದಲ್ಲಿ ಭಾಗವಹಿಸಿದ್ದರು.
ಐಪಿಎಲ್ ಅಧ್ಯಕ್ಷ ಎಚ್.ವಿ.ಪ್ರದೀಪ್‌ಕುಮಾರ್, ಇಂದಿರಮ್ಮ ಎಸ್ಟೇಟ್ ಮಾಲೀಕ ಪ್ರದೀಪ್ ಜಯಪುರ, ಕಾರ್ಯದರ್ಶಿ ಕೆ.ಪಿ.ವಿಶ್ವನಾಥ್, ಖಜಾಂಚಿ ಎಚ್.ಎಸ್.ಕುಮಾರಸ್ವಾಮಿ, ನಿರ್ದೇಶಕ ಎಸ್.ಆರ್.ಆದರ್ಶ, ಎಚ್.ಎಂ.ಚನ್ನಕೇಶವ, ಮಧುಕುಮಾರ್ ಇತರರಿದ್ದರು.