ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗೆ ಲೊ-ಡೋಸ್ ಇಮ್ಯುನೊಥೆರಪಿ ಸಹಕಾರಿ

Published on

ಬೆಂಗಳೂರು: ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ರೋಗಿಗಳ ಚೇತರಿಕೆಗೆ ಲೊ-ಡೋಸ್ ಇಮ್ಯುನೊಥೆರಪಿ ಸಹಕಾರಿ ಎಂದು ಪ್ರಾಯೋಗಿಕ ಅಧ್ಯಯನ ವರದಿ ದೃಢಪಡಿಸಿದೆ ಎಂದು ಎಚ್‌ಸಿಜಿ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್. ಅಜಯಕುಮಾರ್ ತಿಳಿಸಿದರು.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು 54ರಿಂದ 76 ವರ್ಷದೊಳಗಿನ 12 ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅಷ್ಟೂ ಮಂದಿಯಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೆ ಶೇ. 90 ಅಧಿಕ ಪ್ರಮಾಣದಲ್ಲಿ ಕ್ಯಾನ್ಸರ್ ಗಡ್ಡೆ ನಿರ್ಮೂಲನೆಗೊಂಡಿದೆ. ಇದರಿಂದಾಗಿ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಪ್ರಕರಣಗಳ ನಿರ್ವಹಣೆ ಸುಲಭ ಸಾಧ್ಯವಾಗಲಿದ್ದು, ಇದರಿಂದ ಚಿಕಿತ್ಸಾ ವೆಚ್ಚವನ್ನೂ ಕಡಿಮೆಯಾಗಲಿದೆ ಎಂದು ಹೇಳಿದರು.

ಆಸ್ಪತ್ರೆಯ ಪ್ರಾಯೋಗಿಕ ಪರೀಕ್ಷೆಯ (ಕ್ಲಿನಿಕಲ್ ಟ್ರಯಲ್) ನಿರ್ದೇಶಕ ಡಾ.ಟಿ.ಟಿ. ಸತೀಶ್ ಮಾತನಾಡಿ, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಜಗತ್ತಿನ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 4.5 ಪ್ರಕರಣಗಳು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳಾಗಿವೆ. ಇದರ ಮರಣ ಪ್ರಮಾಣವು ಶೇ. 4.6 ಇದೆ. ನಮ್ಮ ದೇಶದಲ್ಲಿ 40ರಿಂದ 60 ವರ್ಷ ವಯಸ್ಸಿನವರಲ್ಲಿನ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 35 ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳಾಗಿವೆ ಎಂದು ಮಾಹಿತಿ ನೀಡಿದರು.

ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಈ ಅಧ್ಯಯನವು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಚಿಕಿತ್ಸೆ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಒದಗಿಸಲಿದೆ ಎಂದ ಅವರು, ಲೊ-ಡೋಸ್ ಇಮ್ಯುನೊಥೆರಪಿಯನ್ನು ನಿಯೋ ಅಡ್ಜುವಂಟ್ ಕೀಮೋಥೆರಪಿ ಜತೆಗೆ ಸಂಯೋಜಿಸಿ, ಅದರ ಪ್ರಯೋಜನ ಪಡೆಯಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net