

ಎಚ್.ಡಿ. ಕೋಟೆ : ಮೈಸೂರು ಭಾಗದಲ್ಲಿ ಬೆಳೆದ ತಂಬಾಕು ಉತ್ತಮ ಗುಣಮಟ್ಟದಿಂದ ಕೂಡಿದ್ದು ಈ ತಂಬಾಕಿಗೆ ಉತ್ತಮ ಬೆಲೆಯನ್ನು ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಶಾಂತಿಪುರದಲ್ಲಿರುವ ತಂಬಾಕು ಮಾರುಕಟ್ಟೆ ಪ್ಲಾಟ್‌ಫಾರಂ 65 ರಲ್ಲಿ ಬುಧವಾರ ತಂಬಾಕು ಹರಾಜಿಗೆ ಚಾಲನೆ ನೀಡಿ ಮಾತನಾಡಿದರು.
ಮೈಸೂರು ಭಾಗದಲ್ಲಿ ಉತ್ಕೃಷ್ಟವಾದ ತಂಬಾಕನ್ನು ಬೆಳೆಯಲಾಗುತ್ತಿದೆ ಎಂದು ವರದಿ ಇದೆ. ಆದರೆ ಕೆಲವೊಮ್ಮೆ ಈ ತಂಬಾಕಿಗೆ ಸರಿಯಾದ ದರ ನೀಡುತ್ತಿಲ್ಲ ಎಂದು ನಮ್ಮ ರೈತರು ದೂರುತ್ತಾರೆ, ಈ ಬಾರಿ ಉತ್ತಮ ಗುಣಮಟ್ಟದ ತಂಬಾಕಿಗೆ ಉತ್ತಮ ದರವೇ ದೊರೆಯಬೇಕು, ಅದಕ್ಕೆ ತಂಬಾಕು ಮಂಡಳಿ ಸದಸ್ಯರು ರೈತರೊಂದಿಗೆ ಮತ್ತು ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಬೆಲೆ ದೊರೆಯುವಂತೆ ಕ್ರಮ ವಹಿಸಬೇಕು ಎಂದರು.
ತಂಬಾಕು ಮಂಡಳಿ ನಿರ್ದೇಶಕ ಶ್ರೀನಿವಾಸ್ ಮಾತನಾಡಿ ಕಳೆದ ಬಾರಿ ಒಂದು ಕೆ.ಜಿ. ತಂಬಾಕಿಗೆ ₹361 ಕ್ಕೆ ಮಾರಾಟವಾಗಿತ್ತು. ಈ ಭಾರಿ ಮೊದಲ ಬಿಡ್ ನಲ್ಲಿ ₹320 ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದರು.
ಈ ಭಾರಿ ರೈತರು ಸುಮಾರು 8 ಮಿಲಿಯನ್ ತಂಬಾಕು ಬೆಳೆಯುವ ನಿರೀಕ್ಷೆ ಇದೆ, ಕಳೆದ ಭಾರಿ 8.37 ಮಿಲಿಯನ್ ತಂಬಾಕನ್ನು ರೈತರು ಬೆಳೆದು ಮಾರಾಟ ಮಾಡಿದ್ದರು. ಓರ್ವ ರೈತ 1.7 ಹೆಕ್ಟರ್ ಪ್ರದೇಶದಲ್ಲಿ ತಂಬಾಕು ಬೆಳೆಯಬೇಕು, ಅದೇ ರೀತಿ ತಾಲ್ಲೂಕಿನಲ್ಲಿ ಈ ಭಾರಿ 7 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೈತರು ತಂಬಾಕು ಬೆಳೆದಿದ್ದಾರೆ ಎಂದರು.ಶಾಸಕ ಅನಿಲ್ ಚಿಕ್ಕಮಾದು ತಂಬಾಕು ಮಂಡಳಿಯೊಳಗೆ ಕ್ಯಾಂಟಿನ್ ಅನ್ನು ಸಹ ಉದ್ಘಾಟಿಸಿದರು.
ಈ ವೇಳೆ ಹರಾಜು ಮಾರುಕಟ್ಟೆಯ ಸೂಪರಿಡೆಂಟ್ ಎಚ್.ವಿ. ವಿಜಯಕುಮಾರ್, ತಂಬಾಕು ಬೆಳೆಗಾರರಾದ ಮೊತ್ತ ಬಸವರಾಜಪ್ಪ, ಬಿ.ವಿ. ಬಸವರಾಜು, ಕೆಂಡಗಣ್ಣಸ್ವಾಮಿ, ಶಿವರಾಜಪ್ಪ, ಆನಂದ, ವಡ್ಡರಗುಡಿ ಬಸವರಾಜು, ಕಾಳೇಗೌಡ, ಮೇಟಿಕುಪ್ಪೆ ಚಂದ್ರಶೇಖರ್, ಸುರೇಶ್, ಗುರುಸ್ವಾಮಿ, ಮಾದರಾಜು, ಪೃಥ್ವಿ, ಪರಶಿವಮೂರ್ತಿ, ಸುದರ್ಶನ್, ಸತೀಶ್ ಇದ್ದರು.