ತಂಬಾಕು ಬೆಳೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಕೆಯಾಗಲಿ

03.Pyp.01
ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಿಟಿಆರ್ ಐ ನ ಹಿರಿಯ ವಿಜ್ಞಾನಿ ಡಾ.ಮಹದೇವಸ್ವಾಮಿ ಮಾತನಾಡಿದರು.
Published on

ಪಿರಿಯಾಪಟ್ಟಣ: ತಂಬಾಕು ಬೆಳೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವಂತೆ ಸಿಟಿಆರ್‌ಐ ಮುಖ್ಯಸ್ಥ ರಾಮಕೃಷ್ಣ ಸಲಹೆ ನೀಡಿದರು.

ತಾಲೂಕಿನ ಕಗ್ಗುಂಡಿಯ ತಂಬಾಕು ಹರಾಜು ಮಾರುಕಟ್ಟೆ ಆವರಣದಲ್ಲಿನ ರೈತ ಭವನದಲ್ಲಿ ತಂಬಾಕು ಮಂಡಳಿ ಹಾಗೂ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ ವತಿಯಿಂದ ತಂಬಾಕು ಬೆಳೆಗಾರರು ಮತ್ತು ತಾಂತ್ರಿಕ ಸಿಬ್ಬಂದಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಬಾರಿ ಮುಂಗಾರು ಮಳೆ ವಿಳಂಬವಾಗುತ್ತಿರುವುದರಿಂದ ಕೆಲವೆಡೆ ತಂಬಾಕು ನಾಟಿಯೂ ತಡವಾಗುತ್ತಿದೆ. ತಂಬಾಕು ನಾಟಿ ಮಾಡಿದ 7 ರಿಂದ 10 ದಿನಗಳೊಳಗೆ ಮೊದಲ ಹಂತದ ರಸಗೊಬ್ಬರ ಪೂರೈಸಬೇಕು. 30 ರಿಂದ 35 ದಿನಗಳ ನಂತರ ಎರಡನೇ ಹಂತದ ರಸಗೊಬ್ಬರ ಪೂರೈಕೆ ಮಾಡಬೇಕು. ಹವಾಮಾನ ವೈಪರೀತ್ಯದಿಂದ ಸಣ್ಣ ಸಸಿಗಳಲ್ಲಿ ಸೊರಗು ಮತ್ತು ಕಪ್ಪು ಕಾಂಡ ರೋಗ ಕಂಡುಬರುತ್ತಿದ್ದು, ಸೊರಗು ರೋಗ ನಿಯಂತ್ರಿಸಲು ಶಿಲೀಂದ್ರ ನಾಶಕ ಮತ್ತು ಕಪ್ಪುಕಾಂಡ ರೋಗ ನಿಯಂತ್ರಣಕ್ಕಾಗಿ ರಿಡೋಮಿಲ್ ಔಷಧವನ್ನು ತಂಬಾಕು ಮಂಡಳಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಬಳಸಬೇಕು ಎಂದರು.

ಕಂಕುಳ ಕುಡಿ ನಿರ್ವಹಣೆ ಮತ್ತು ಸಸಿ ಬೆಳವಣಿಗೆಗಳ ಬಗ್ಗೆ ಸಿಟಿಆರ್‌ಐ ನ ಹಿರಿಯ ವಿಜ್ಞಾನಿ ಡಾ.ಮಹದೇವಸ್ವಾಮಿ ಮಾಹಿತಿ ನೀಡಿದರು. ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ.ಬಸವರಾಜು, ನಿರ್ದೇಶಕರಾದ ಜಿ.ಸಿ.ವಿಕ್ರಂ ರಾಜ್, ದಿನೇಶ್, ಪ್ರಭಾರ ಪ್ರಾದೇಶಿಕ ವ್ಯವಸ್ಥಾಪಕ ಶಂಭುಲಿಂಗೇಗೌಡ, ಹರಾಜು ಅಧೀಕ್ಷಕರಾದ ಬ್ರಿಜ್ ಭೂಷಣ್, ಧನರಾಜ್, ಸಿದ್ದರಾಮ ಡಾಂಗೆ, ಚಂದ್ರಶೇಖರ್, ವಿಜಯಕುಮಾರ್, ರಾಮ ಮೋಹನ್ ಸೂರಿ, ಪಾಂಡೆ, ಸ್ವರ್ಣ ದತ್ ಐಸಾಕ್, ಸಿಟಿಆರ್‌ಐನ ವಿಜ್ಞಾನಿ ವೆಂಕಟೇಶ್, ಐ ಟಿ ಸಿ ಕಂಪನಿಯ ಲೀಫ್ ಮ್ಯಾನೇಜರ್ ಚೆನ್ನ ವೀರೇಶ್, ಡೆಕ್ಕನ್ ಕಂಪನಿಯ ಪಾಷಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net