ಮೇಕ್ ಇನ್ ಇಂಡಿಯಾ ಸಾಕಾರ; ಸುಧಾರಿತ ತಂತ್ರಜ್ಞಾನದಿಂದ ತಯಾರಿಸಿದ ಹೈಡ್ರಾಲಿಕ್ ರಿಗ್​ನಿಂದ ತೈಲ ಬಾವಿ ಕೊರೆಯುವಿಕೆ ಯಶಸ್ವಿ

Make in India
Published on

| ಮೃತ್ಯುಂಜಯ ಕಪಗಲ್ ಅಹ್ಮದಾಬಾದ್

ಸುಧಾರಿತ, ಸುಸಜ್ಜಿತ, ಸುರಕ್ಷಿತ ತಂತ್ರಜ್ಞಾನ ಬಳಸಿ ದೇಶೀಯ ವಾಗಿ ತಯಾರಿಸಿದ ರಿಗ್​ನಿಂದ ತೈಲ ಬಾವಿ ಕೊರೆಯುವಿಕೆ ಯಶಸ್ವಿಯಾಗಿದ್ದು, ದೇಶದ ಅನಿಲ ಮತ್ತು ಅನಿಲ ಉತ್ಪಾದನಾ ಕ್ಷೇತ್ರ ಹೊಸ ಆಯಾಮ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಉಪಕ್ರಮ ಅವರ ತವರು ರಾಜ್ಯ ಗುಜರಾತ್​ನಲ್ಲಿ ಸಾಕಾರಗೊಂಡಿರುವುದು ಗಮನಾರ್ಹ.

ಇಂಜಿನಿಯರಿಂಗ್, ಮೂಲ ಸವಲತ್ತು ನಿರ್ಮಾಣ ಕಾಮಗಾರಿಗಳ ದೈತ್ಯಶಕ್ತಿ, ಹೈದರಾಬಾದ್ ಮೂಲದ ಮೇಘ ಇಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿ ಹೊಸದೊಂದು ಮೈಲುಗಲ್ಲು ಸ್ಥಾಪಿಸಿದೆ. ಗುಜರಾತ್​ನ ಧಮಸಾನ ಗ್ರಾಮದ ಬಳಿಯಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿ (ಒಎನ್​ಜಿಸಿ) ಸ್ಥಾವರದಲ್ಲಿ ತೈಲ ಬಾವಿ ಕೊರೆಯಲಾಗಿದೆ. ಯೋಜನಾ ಪ್ರದೇಶದಲ್ಲಿ ಅಳವಡಿಸಿರುವ ಡ್ರಿಲ್ಲಿಂಗ್ ರಿಗ್ 1500 ಅಶ್ವಶಕ್ತಿ ಸಾಮರ್ಥ್ಯ ಹೊಂದಿದೆ. ಹೈಡ್ರಾಲಿಕ್ ಭೂಮೇಲ್ಮೈ ಮಟ್ಟದಿಂದ ಆಳಕ್ಕೆ ಬಾವಿ ಕೊರೆದು ತೈಲ ಮತ್ತು ಅನಿಲ ಹೊರ ತೆಗೆಯುವ ಈ ಯಂತ್ರ (ರಿಗ್) ಸಂಪೂರ್ಣ ಸ್ವಯಂಚಾಲಿತ, ಎಲ್ಲಿ ಬೇಕೆಂದರಲ್ಲಿ ಕೊಂಡೊಯ್ಯುವ ವಿಶೇಷತೆಯನ್ನು ಒಳಗೊಂಡಿದೆ.

ಸವಾಲಾಗಿ ಸ್ವೀಕಾರ: ನೀರಾವರಿ, ಮೂಲ ಸವಲತ್ತು, ವೈಮಾನಿಕ, ರಕ್ಷಣಾ ಕ್ಷೇತ್ರದಲ್ಲಿ ಎತ್ತಿದ ಕೈಯಾಗಿರುವ ಒಎನ್​ಜಿಸಿ ನೀಡಿದ ಸುಧಾರಿತ ತಂತ್ರಜ್ಞಾನವುಳ್ಳ ಡ್ರಿಲ್ಲಿಂಗ್ ರಿಗ್​ಗಳ ಪೂರೈಕೆ ಗುತ್ತಿಗೆಯನ್ನು ಸವಾಲಾಗಿ ಸ್ವೀಕರಿಸಿ, ಅದರಲ್ಲಿ ಸಫಲತೆ ಸಾಧಿಸಿದೆ.

1,800 ಮೀಟರ್ ಕೊರೆತ: ಇಟಲಿಯ ಟ್ರೆವಿ ಸಮೂಹದ ಡ್ರಿಲ್ ಮೆಕ್ ಕಂಪನಿಯನ್ನು 3 ವರ್ಷಗಳ ಹಿಂದೆಯಷ್ಟೇ ಎಂಇಐಎಲ್ ಸ್ವಾಧೀನಕ್ಕೆ ಪಡೆದಿದ್ದು, ಯೂರೋಪ್ ಮತ್ತು ಅಮೆರಿಕ ತಂತ್ರಜ್ಞಾನ ಆಮದು ಮಾಡಿಕೊಂಡು ದೇಶದ ತಾಂತ್ರಿಕತೆ, ನೈಪುಣ್ಯತೆ ಸಮೀಕರಿಸಿ, ಮೊಬೈಲ್ ಹೈಡ್ರಾಲಿಕ್ ಲ್ಯಾಂಡ್ ಡ್ರಿಲ್ ರಿಗ್​ನಿಂದ ಕೇವಲ 2 ವಾರಗಳಲ್ಲಿ 1,800 ಮೀಟರ್ ಆಳಕ್ಕೆ ತೈಲ ಬಾವಿ ಕೊರೆದು, ಮೊದಲ ಹಂತದ ಕೇಸಿಂಗ್ ಅಳವಡಿಸುವ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಂಪನಿಗೆ ಒಪ್ಪಿಸಿದ ಜವಾಬ್ದಾರಿಯನ್ನು ಮೊದಲ ರಿಗ್​ನಲ್ಲಿ ಮುಗಿಸಿದ್ದು, ಕೆಲವೇ ವಾರಗಳಲ್ಲಿ ತೈಲ ಉತ್ಪಾದನೆಗೆ ಭೂಮಿಕೆ ಸಜ್ಜುಗೊಳಿಸಲಾಗಿದೆ. ಮತ್ತೊಂದು ತೈಲ ನಿಕ್ಷೇಪವಿರುವ ಧಮಸಾನದ 2ನೇ ರಿಗ್​ನಲ್ಲಿ ಬಾವಿ ಕೊರೆಯುವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎಂದು ಕಂಪನಿಯ ಉಪಾಧ್ಯಕ್ಷ ಎಸ್.ರಾಜೇಶ್ ರೆಡ್ಡಿ, ತೈಲ ರಿಗ್ಸ್ ವಿಭಾಗದ ನಿರ್ದೇಶಕ ಎನ್.ಕೃಷ್ಣಕುಮಾರ್ ತಿಳಿಸಿದರು.

ಉತ್ತರದಲ್ಲಿ ಹೊಸ ಉಮೇದಿ: ತೈಲ ಆಮದು ಅವಲಂಬನೆ ತಗ್ಗಿಸಿ, ದೇಶೀಯವಾಗಿ ತೈಲ ಉತ್ಪಾದನೆ ಹೆಚ್ಚಿಸಬೇಕು. ಆ ಮೂಲಕ ವಿದೇಶಿ ವಿನಿಮಯ ಉಳಿಸಿಕೊಳ್ಳಬೇಕೆಂಬ ಕೇಂದ್ರ ಸರ್ಕಾರದ ಒತ್ತಾಸೆ, ಒಎನ್​ಜಿಸಿ ಅಭಿಲಾಷೆಗೆ ಪೂರಕವಾಗಿ ಎಂಇಐಎಲ್ ಕಾರ್ಯನಿರ್ವಹಿಸಿದೆ. ತೈಲ ನಿಕ್ಷೇಪ ಪತ್ತೆ, ರಿಗ್​ನಿಂದ ತೈಲ ಬಾವಿ ಕೊರೆದ ಯೋಜನಾ ಸ್ಥಾವರವಿರುವ ಧಮಸಾನ ಗ್ರಾಮವು ಗುಜುರಾತ್​ನ ಕಲೋಲ ತಾಲೂಕಿನಲ್ಲಿದೆ. ಈ ತಾಲೂಕು ಉತ್ತರ ಭಾರತದ ಹೆಬ್ಬಾಗಿಲು ಎಂದೇ ಹೆಸರುವಾಸಿ. ಅಷ್ಟೇ ಅಲ್ಲ, ಗೃಹ ಸಚಿವ ಅಮಿತ್ ಷಾ ಪ್ರತಿನಿಧಿಸುವ ಗಾಂಧಿನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಯೋಜನಾ ಸ್ಥಾವರವಿದೆ.

ರಿಗ್ ವೈಶಿಷ್ಟ್ಯ: ಕಡಿಮೆ ಜಮೀನು, ವಿದ್ಯುತ್, ಮಾನವ ಸಂಪನ್ಮೂಲ ಬಳಕೆ, ಹೆಚ್ಚು ವೇಗ, ನಿಖರತೆ, ಕ್ಷಮತೆಯು ಸುಧಾರಿತ ತಂತ್ರಜ್ಞಾನದ ಡ್ರಿಲ್ಲಿಂಗ್ ರಿಗ್​ಗಳ ವೈಶಿಷ್ಟ್ಯ. ಡಿಜಿಟಲ್ ತಂತ್ರಜ್ಞಾನ ಮೂಲಕ ನಿರ್ವಹಿಸಬಹುದಾಗಿದ್ದು, ತೈಲ ಬಾವಿ ಕೊರೆಯುವ ಸ್ಥಳದಲ್ಲಿ ಕೆಲಸಗಾರರು ಇರಬೇಕೆಂದಿಲ್ಲ. ಸುರಕ್ಷತೆ ದೃಷ್ಟಿಯಿಂದ ಪ್ಲಸ್ ಪಾಯಿಂಟ್.

ಎರಡರಲ್ಲೂ ಎತ್ತಿದ ಕೈ: ಕಡಲಿನಲ್ಲಿ ಹಾಗೂ ಕಡಲಾಚೆಯ ಜಮೀನಿನಲ್ಲಿ ತೈಲ ಬಾವಿ ಕೊರೆಯುವ ರಿಗ್ ತಯಾರಿಕೆಯಲ್ಲಿ ಎಂಇಐಎಲ್ ಎತ್ತಿದ ಕೈ. ಈ ಡ್ರಿಲ್ಲಿಂಗ್ ರಿಗ್​ಗಳಲ್ಲೂ ಎರಡು ವಿಧಗಳಿವೆ. ವರ್ಕ್ ಓವರ್ (ತೈಲ ಬಾವಿಯಿಂದ ಮೇಲೆತ್ತಿ ರಿಪೇರಿ ಮಾಡಿ ಪುನರುಜ್ಜೀವನಗೊಳಿಸುವ ಸುಲಭವಾಗಿ ಸಾಗಿಸಬಲ್ಲ), ಲ್ಯಾಂಡ್ ಡ್ರಿಲ್ಲಿಂಗ್ ರಿಗ್ (ಯಂತ್ರೋಪಕರಣಗಳ ಬಿಡಿ ಭಾಗಗಳನ್ನು ಬಿಚ್ಚಿ ಇನ್ನೊಂದು ಸ್ಥಳಕ್ಕೆ ಕೊಂಡೊಯ್ದು ಮರು ಜೋಡಿಸುವುದು). ಆಳದಲ್ಲಿ ಕೊರೆಯುವ ವೇಳೆ ದೊರೆಯುವ ಹೊಂಡು, ನೀರು ಪ್ರತ್ಯೇಕಿಸಿ ಭೂಮೇಲ್ಮೈಗೆ ಕಳುಹಿಸುವುದು ಮತ್ತೊಂದು ವಿಶೇಷತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net