

ಮೈಸೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷ(ಬಿಷಪ್)ರಾಗಿ ಶಿವಮೊಗ್ಗದ ಡಾ.ಫ್ರಾನ್ಸಿಸ್ ಸೆರಾವೋ ಅ.7 ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ಮೈಸೂರು ಡಯೋಸಿಸ್‌ನ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರೆಸ್ ತಿಳಿಸಿದರು.
ಅಂದು ಸಂಜೆ 4.30ಕ್ಕೆ ನಗರದ ಅಶೋಕ ರಸ್ತೆಯಲ್ಲಿ ಇರುವ ಸೇಂಟ್ ಜೋಸೆಫ್ ( ಸೇಂಟ್ ಫಿಲೋಮಿನಾ) ಕ್ಯಾಥೋಡ್ರೆಲ್‌ನಲ್ಲಿ ಅಧಿಕಾರ ಸ್ವೀಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ತಮಗೂ ಬೀಳ್ಕೂಡುಗೆ ಸಮಾರಂಭ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಕಾಡೂ ಅಧಿಕಾರ ಸ್ವೀಕಾರ ಸಮಾರಂಭವನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಮತ್ತು ನೇಪಾಳದ ಅಪೋಸ್ಟೋಲಿಕ್ ಬೋಧಕರಾದ ಲಿಯೋಪೋಲ್ಡ್ ಗಿರೆಲ್ಲಿ ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಮೈಸೂರು ಧರ್ಮಪ್ರಾಂತ್ಯಕ್ಕೆ ಸೇರುವ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಸೇರಿ ಇತರೆ ಜಿಲ್ಲೆಗಳ ಚರ್ಚ್‌ಗಳ ಫಾದರ್‌ಗಳು, ನನ್‌ಗಳು, ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಂಜೆ 4.30ಕ್ಕೆ ಬಲಿಪೂಜೆ ನಡೆಯಲಿದೆ. 6.30ಕ್ಕೆ ಸನ್ಮಾನ ಸಮಾರಂಭ ಪ್ರಾರಂಭವಾಗುತ್ತದೆ. ರಾತ್ರಿ 8 ಗಂಟೆಗೆ ಸಹಭೋಜನ ಕಾರ್ಯಕ್ರಮದೊಂದಿಗೆ ಸಮಾರಂಭ ಸಮಾಪ್ತಿಯಾಗಲಿದೆ ಎಂದು ತಿಳಿಸಿದರು.
ಡಾ.ಫ್ರಾನ್ಸಿಸ್ ಸೆರಾವೋ ಅವರು ಧರ್ಮ ಕ್ಷೇತ್ರದ ಮೂರನೇ ಧರ್ಮಾಧ್ಯಕ್ಷರಾಗಿ ‘ವಿಶ್ವಾಸದ ಸೇವೆ ಯಥೇಚ್ಚ ಜೀವ’ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಸಲಿದ್ದಾರೆ ಎಂದರು.
ಪ್ರಮುಖರಾದ ಫಾ. ಆಲ್ಪ್ರಾಡ್ ಜಾನ್ ಮೆಂಡೋನ್ಸಾ, ಫಾ.ಸೆಬಾಸ್ ಇಯನ್ ಅಲೆಕ್ಸಾಂಡರ್, ಫಾ.ಎಡ್ವರ್ಡ್ ಸಾಲ್ಡಾನ, ಮೈಕೆಲ್ ನರೋನಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.