

ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ
ಟೊಮ್ಯಾಟೊ ಬೆಲೆ ಕುಸಿದಿದ್ದು, ಬೆಳೆಗೆ ಹಾಕಿದ ಲಕ್ಷಾಂತರ ರೂಪಾಯಿ ಬಂಡವಾಳ ರೈತನ ಕೈಕಚ್ಚಿದೆ. ಕಳೆದ ವರ್ಷ ಅತಿವೃಷ್ಟಿ ಮತ್ತಿತರ ಕಾರಣಗಳಿಂದಾಗಿ ನಷ್ಟದ ಪಾಲಾಗಿದ್ದ ಅನ್ನದಾತ ಮತ್ತೆ ಸಾಲಗಾರನಾಗಿದ್ದಾನೆ. ಆದರೆ ನೆರವಿಗೆ ದಾವಿಸಬೇಕಿದ್ದ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದು, ರೈತರು ಹಿಡಿಶಾಪ ಹಾಕುತ್ತಿದ್ದಾರೆ.
ಏಷ್ಯಾದಲ್ಲೇ 2ನೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೋಲಾರದ ಮಾರುಕಟ್ಟೆಗೆ ಪ್ರಸ್ತುತ ಏಳೆಂಟು ಸಾವಿರ ಕ್ವಿಂಟಾಲ್ ಉತ್ಪನ್ನ ಬರುತ್ತಿದ್ದು, 15 ಕೆ.ಜಿ ಬಾಕ್ಸ್ ಬೆಲೆ 40ರಿಂದ 100ರೂ. ಒಳಗೆ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಹಿಂಗಾರಿಗೆ 3894 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದ್ದು, ಹಣ್ಣು ಬಿಡಿಸುವ ಕೂಲಿ ಹಣ ಸಹ ಬರುವುದಿಲ್ಲ ಎಂದು ತೋಟಗಳಲ್ಲೇ ಹಣ್ಣುಗಳನ್ನು ಕೀಳದೆ ಬಿಡಲಾಗಿದೆ.
ಜಿಲ್ಲೆಯಿಂದ ದೇಶದ ನಾನಾ ಕಡೆಯಷ್ಟೇ ಅಲ್ಲದೆ ವಿದೇಶಗಳಿಗೆ ಸಹ ಟೊಮ್ಯಾಟೊ ಸರಬರಾಜು ಮಾಡಲಾಗುತ್ತದೆ. ಆದರೆ ಪ್ರಸ್ತುತ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತಿಸ್ಘಡ ಸೇರಿ ಇತರ ರಾಜ್ಯಗಳಲ್ಲೂ ಟೊಮ್ಯಾಟೊ ಯಥೇಚ್ಛವಾಗಿ ಬೆಳೆದಿರುವುದರಿಂದ ಇಲ್ಲಿಂದ ಬೇರೆ ಕಡೆ ಕಳುಹಿಸುತ್ತಿಲ್ಲ. ಮಾರುಕಟ್ಟೆಗೆ ಬರುತ್ತಿರುವ ಉತ್ಪನ್ನ ಬಹುತೇಕ ಚಿತ್ತೂರು ಜಿಲ್ಲೆಯ ಸಂಸ್ಕರಣಾ ಘಟಕಗಳಿಗೆ ಹೋಗುತ್ತಿದೆ.
ಜಿಲ್ಲೆಯಲ್ಲಿ ಟೊಮ್ಯಾಟೊ ಅನ್ನು ಮೇ ಮತ್ತು ನವೆಂಬರ್ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಸೀಸನ್ನಲ್ಲಿ ಮಾರುಕಟ್ಟೆಗೆ ದಿನವೊಂದಕ್ಕೆ ಸುಮಾರು 40 ಸಾವಿರ ಕ್ವಿಂಟಾಲ್ ಉತ್ಪನ್ನ ಬರುತ್ತದೆ. ಆದರೆ ಈಗ ಅನ್ಸೀಸನ್ನಲ್ಲಿ ಹೆಚ್ಚಾಗಿ ಬೆಳೆ ಬರುತ್ತಿದ್ದು, ಇಲ್ಲಿಂದ ಉತ್ಪನ್ನ ತರಿಸಿಕೊಳ್ಳುವ ರಾಜ್ಯಗಳಲ್ಲೂ ಅಧಿಕ ಪ್ರಮಾಣದಲ್ಲಿ ಬೆಳೆ ಬೆಳೆದಿರುವುದರಿಂದ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ಸಾಧಾರಣಕ್ಕಿಂತ ಹೆಚ್ಚು ಮಳೆ ಬಂದರೂ ಮಣ್ಣಿನ ಗುಣದಿಂದ ಬೆಳೆ ಅಷ್ಟಾಗಿ ಹಾಳಾಗುವುದಿಲ್ಲ. ಹೀಗಾಗಿ ಸೀಸನ್ನಲ್ಲಿ ಬಾಕ್ಸ್ ಟೊಮ್ಯಾಟೊ ಕನಿಷ್ಟ 500 ರೂ.ಗಿಂತ ಹೆಚ್ಚಾಗಿರುತ್ತದೆ. ಆದರೆ ಕಳೆದ ಮೇ ಮತ್ತು ಸೆಪ್ಟೆಂಬರ್ನಲ್ಲಿ ಬೆಲೆ ಸಿಗಲಿಲ್ಲ. ಅತಿವೃಷ್ಟಿಯಿಂದ ಬೆಳೆ ಹಾಳಾಗಿ ಲಕ್ಷಾಂತರ ರೂಪಾಯಿ ನಷ್ಟ ಹೊಂದಿದ್ದರು.
ಕಳೆದುಕೊಂಡಿದ್ದೇ ಹೆಚ್ಚು: ಕಳೆದ ವರ್ಷ ಎರಡು ಸೀಸನ್ನಲ್ಲಿಯೂ ಬೆಳೆಗಾರರಿಗೆ ಸಿಕ್ಕಿದ್ದು ಬಾಕ್ಸ್ಗೆ 200 ರೂ.ಗಿಂತ ಕಡಿಮೆ ದರ. ಹಾಕಿದ ಬಂಡವಾಳವೂ ಸಿಕ್ಕಿರಲಿಲ್ಲ. ಇನ್ನು ಡಿಸೆಂಬರ್ನಲ್ಲಿ ಬೆಲೆ 1500 ತನಕ ಏರಿತ್ತಾದರೂ ತೋಟಗಳಲ್ಲಿ ಉತ್ಪನ್ನವಿರಲಿಲ್ಲ. ಆಗ ಬಂಗಾರದಂತ ಬೆಲೆ ಸಿಕ್ಕಿದ್ದನ್ನು ಕಂಡು ಜನವರಿಯಿಂದ ಬೆಳೆ ಬೆಳೆಯಲು ಪ್ರಾರಂಭಿಸಿದರು. ಫೆಬ್ರವರಿಯಲ್ಲೂ 200ರಿಂದ 250 ರೂ. ಬೆಲೆ ಇತ್ತು. ಆದರೆ ಈಗ ಬೆಳೆ ಕಟಾವು ಹಂತದಲ್ಲಿದ್ದು, ಕೊಳ್ಳುವವರು ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರೈತರು ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು 1ಲಕ್ಷ ರೂ.ಗೂ ಅಧಿಕ ಬಂಡವಾಳ ಹಾಕಬೇಕಿದ್ದು, ಲಕ್ಷಾಂತರ ರೂ. ಸಾಲಗಾರರಾಗುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಧ್ವನಿಯೆತ್ತುತ್ತಿಲ್ಲ ಎಂದು ರೈತರು ಅಸಮಾಧಾನಗೊಂಡಿದ್ದಾರೆ.
ಮಾರುಕಟ್ಟೆಗೆ 7ರಿಂದ 8ಸಾವಿರ ಕ್ವಿಂಟಾಲ್ ಉತ್ಪನ್ನ ಬರುತ್ತಿದೆ. ಬೇರೆ ರಾಜ್ಯಗಳಿಗೆ ಇಲ್ಲಿಂದ ಟೊಮ್ಯಾಟೊ ಸರಬರಾಜಾಗುತ್ತಿಲ್ಲ. ರೈತರು ಬೇಡಿಕೆ, ಸಾಗಾಣಿಕೆ ವೆಚ್ಚ ಗಿಟ್ಟುವುದಿಲ್ಲ ಎಂದು ತೋಟಗಳಲ್ಲೇ ಹಣ್ಣುಗಳನ್ನು ಬಿಟ್ಟಿದ್ದಾರೆ. ಏಪ್ರಿಲ್ನಲ್ಲೂ ಇದೇ ಪರಿಸ್ಥಿತಿ ಮುಂದುವರಿಯಬಹುದು. ರೈತರು ಮಿಶ್ರ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ರವಿಕುಮಾರ್, ಕಾರ್ಯದರ್ಶಿ, ಎಪಿಎಂಸಿ ಕೋಲಾರ ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಸಸಿಗಳಿಗೆ 10ಸಾವಿರ, ತಿಪ್ಪೆ ಮತ್ತು ರಾಸಾಯನಿಕ ಗೊಬ್ಬರಗಳಿಗೆ 25 ಸಾವಿರ, ಬಳ್ಳಿ ನಿಲ್ಲಿಸಲು ಬಳಸುವ ಕಡ್ಡಿಗಳು, ಕೀಟನಾಶಕ ಮತ್ತು ದಾರಕ್ಕೆ 25 ಸಾವಿರ, ಕೂಲಿಯವರಿಗೆ 40 ಸಾವಿರ...ಹೀಗೆ ಎಲ್ಲ ಸೇರಿ 1 ಲಕ್ಷ ರೂ.ಗೂ ಅಧಿಕ ಖರ್ಚು ಬರುತ್ತದೆ. ಆದರೆ 2 ವರ್ಷದಿಂದ ಸತತ ನಷ್ಟ ಹೊಂದುತ್ತಿದ್ದರೂ ನಮ್ಮ ಕಷ್ಟ ಕೇಳುವವರಿಲ್ಲ. ಎಸ್.ರವಿ, ಟೊಮ್ಯಾಟೊ ಬೆಳೆಗಾರ, ಆನೇಪುರ. ಎಲ್ಲ ಕಡೆ ನೀರಿದ್ದು, ರೈತರು ಟೊಮ್ಯಾಟೊವನ್ನು ಎಲ್ಲ ಋತುಮಾನದಲ್ಲೂ ಬೆಳೆಯಲು ಮುಂದಾಗಿ ನಷ್ಟ ಹೊಂದುವಂತಾಗಿದೆ. ಕಳೆದ ವರ್ಷ ಉತ್ಪನ್ನವಿದ್ದಾಗ ಬೆಲೆ ಇಲ್ಲದೆ ನಷ್ಟ ಹೊಂದಬೇಕಾಯಿತು. ಮಳೆ ಹಾನಿಯಿಂದಲೂ ಎಲ್ಲ ಬೆಳೆಗಳನ್ನು ಕಳೆದುಕೊಳ್ಳಬೇಕಾಯಿತು. ಟೊಮ್ಯಾಟೊಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸುವವರೇ ಇಲ್ಲ. ಅಧಿಕಾರಿಗಳು ಕ್ಷೇತ್ರ ಸಂಚಾರ ನಿಲ್ಲಿಸಿದ್ದಾರೆ. ಹೀಗಾಗಿ ರೈತರ ಪಾಡು ಹೀನಾಯವಾಗಿದೆ. ರಮೇಶ್, ರೈತ, ಕಾರಂಗುಟ್ಟೆ