ಜೀವನ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲ

16bhr 1 ramabapuri
ಬಾಳೆಹೊನ್ನೂರು ರಂಭಾಪುರಿ ಪೀಠದ ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಅಂಗವಾಗಿ ಜಗದ್ಗುರುಗಳ ಮಂಗಲಮಯ ಭಾವಚಿತ್ರದ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು.
Published on

ಬಾಳೆಹೊನ್ನೂರು: ಮನುಷ್ಯನಿಗೆ ಬದುಕಿನಲ್ಲಿ ಭರವಸೆ ಮತ್ತು ಕನಸುಗಳು ಇರಬೇಕು. ಧರ್ಮ ಮತ್ತು ಸಂಸ್ಕೃತಿಯ ಆದರ್ಶಗಳನ್ನು ಅನುಸರಿಸಿ ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ನಿಶ್ಚಿತ. ಜೀವನ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ರಂಭಾಪುರಿ ಪೀಠದಲ್ಲಿ ಭಾನುವಾರ ನಡೆದ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳ ಜನ್ಮ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೀವನದಲ್ಲಿ ಉನ್ನತಿ ಸಾಧಿಸಬೇಕಾದರೆ ಜನಬಲ, ಹಣಬಲ, ತೋಳ್ಬಲ ಇದ್ದರೆ ಸಾಲದು. ಅದರೊಂದಿಗೆ ದೈವ ಬಲವೂ ಮುಖ್ಯ. ಆಶಾವಾದಿಯು ಕಷ್ಟ ಕಾಲದಲ್ಲೂ ಅವಕಾಶವನ್ನು ಹುಡುಕುತ್ತಾನೆ. ವೀರಶೈವ ಧರ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಲಿಂ. ಶ್ರೀ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯ ಭಗವತ್ಪಾದರು ಶ್ರಮಿಸಿದ್ದನ್ನು ಎಂದಿಗೂ ಮರೆಯಲಾಗದು ಎಂದರು.

ರಚನಾತ್ಮಕ ಗುಣಾತ್ಮಕ ಸತ್ಕಾರ್ಯಗಳಿಂದ ಎಲ್ಲರ ಮನ ಮಂದಿರಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ದೊಡ್ಡದೆಂದು ಭಕ್ತ ಸಮುದಾಯಕ್ಕೆ ಬೋಧಿಸುತ್ತಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯರಿಂದ ಬೋಧಿಸಲ್ಪಟ್ಟ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಸಾರವನ್ನು ಭಕ್ತ ಸಂಕುಲಕ್ಕೆ ಮನವರಿಕೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಅವರು ಬದುಕಿ ಬಾಳಿದ್ದರೆ ಇಂದಿಗೆ ನೂರು ವರ್ಷ ಪರಿಪೂರ್ಣವಾಗುತ್ತಿತ್ತು. ಅವರ ಜನ್ಮ ಶತಮಾನೋತ್ಸವ ಶ್ರೀ ರಂಭಾಪುರಿ ಪೀಠದಲ್ಲಿ ವಿಧ್ಯುಕ್ತವಾಗಿ ಆಚರಿಸುತ್ತಿರುವುದು ಸಂತೋಷ ತಂದಿದೆ. ಅವರ ಜೀವನಾದರ್ಶಗಳನ್ನೊಳಗೊಂಡ ಜೀವನ ಚರಿತ್ರೆ ಧರ್ಮ ಚೇತನ ನಾಮಾಂಕಿತದಲ್ಲಿ ಕೃತಿಯೊಂದು ಬಿಡುಗಡೆಗೊಳ್ಳುತ್ತಿರುವುದು ನಮಗೆ ತೃಪ್ತಿ ತಂದಿದೆ. ಮುಂದಿನ ಆರು ತಿಂಗಳು ವಿವಿಧ ಸಮಾರಂಭಗಳಲ್ಲಿ ಶ್ರೀ ರುದ್ರಮುನಿ ಜಗದ್ಗುರುಗಳ ಜನ್ಮ ಶತಮಾನೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು.

ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡರು ಮೂರು ದಶಕಕ್ಕೂ ಹೆಚ್ಚು ಕಾಲ ಶ್ರೀಪೀಠದ ಆದರ್ಶ ಚಿಂತನಗಳನ್ನು ಮಾಧ್ಯಮದವರಿಗೆ ಕಳಿಸುವ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಇದೇ ಅಪೂರ್ವ ಸಂದರ್ಭದಲ್ಲಿ ಅವರ ಜನ್ಮ ಅಮೃತ ಮಹೋತ್ಸವ ಆಚರಿಸುತ್ತಿರುವುದು ಹಾಗೂ ಅವರ ಜೀವನ ಯಶೋಗಾಥೆ ಸಾರುವ ಬಾಳಹೊಂಗಿರಣ ಕೃತಿ ಪ್ರಕಟಗೊಳ್ಳುತ್ತಿರುವುದು ನಮಗೆ ಸಂತೋಷ ಉಂಟುಮಾಡಿದೆ. ಇದೇ ಸಂದರ್ಭದಲ್ಲಿ ಅವರಿಗೆ ವಾರ್ತಾ ಸೇವಾ ಸಂಜೀವಿನಿ ಪ್ರಶಸ್ತಿ ಕೊಟ್ಟು ಆಶೀರ್ವದಿಸಿರುವುದು ಸಂತಸ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net