ಜಿಲ್ಲೆಯಲ್ಲಿ ಕೋಮುಲ್ ಚುನಾವಣೆಯಲ್ಲಿ ಜೆಡಿಎಸ್ ಹಿನ್ನಡೆ / ಜಿಲ್ಲಾಧ್ಯಕ್ಷರ ಬದಲಾವಣೆಗೆ ಕೂಗು / ಜಿಲ್ಲೆಯಲ್ಲಿ ಮತ್ತೆ ಜೆಡಿಎಸ್ ಭದ್ರಕೋಟೆ ಉಳಿಯುವಂತಾಗಬೇಕು / ವರಿಷ್ಠರಲ್ಲಿ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜೆಡಿಎಸ್ ಪಕ್ಷದ ಭದ್ರ ಕೋಟೆಯಾಗಿದ್ದ ಕೋಲಾರ ಜಿಲ್ಲೆಯಲ್ಲಿ ದಿನೇ ದಿನೇ ಸಂಘಟನೆ ಕುಸಿಯುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿರುವ ಗುಂಪುಗಾರಿಕೆಯ ಲಾಭವನ್ನು ಪಡೆದು ಪಕ್ಷ ಸಂಘಟನೆ ಮಾಡುವಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ವಿಫಲವಾಗಿದ್ದು, ಜಿಲ್ಲಾ ಜೆಡಿಎಸ್ ಪಕ್ಷಕ್ಕೆ ಜಿಲ್ಲಾಧ್ಯಕ್ಷರ ಬದಲಾವಣೆಗೆ ಜೆಡಿಎಸ್ ಕಾರ್ಯಕರ್ತರಲ್ಲಿ ಕೂಗು ಹೆಚ್ಚಾಗುತ್ತಿದೆ.

ಒಂದು ಕಾಲದಲ್ಲಿ ಜೆಡಿಎಸ್ ಪಕ್ಷ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕೋಲಾರ ಜಿಲ್ಲೆ ಸಂಪೂರ್ಣ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಇದೀಗ ಕೋಮುಲ್ ಚುನಾವಣೆಯಲ್ಲಿ ಗೆಲ್ಲಲು ಪರದಾಡುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದು, ಜಿಲ್ಲೆಯಲ್ಲಿ ಪ್ರತಿನಿತ್ಯ ಕಾಂಗ್ರೆಸ್ ನಾಯಕರು ಬೀದಿಗಳಲ್ಲಿಯೇ ಕಚ್ಚಾಡುತ್ತಿದ್ದು, ಅದರ ಲಾಭವನ್ನು ಪಡೆದು ಪಕ್ಷ ಸಂಘಟಿಸಿ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಜೆಡಿಎಸ್ ಪಕ್ಷದ ನಾಯಕರು ವಿಫಲವಾಗಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಈಗಾಗಲೇ ಜಿಲ್ಲಾದ್ಯಕ್ಷರ ಬದಲಾವಣೆಯ ಕೂಗು ಜೆಡಿಎಸ್ ವರಿಷ್ಠರಾದ ಹೆಚ್.ಡಿ ಕುಮಾರಸ್ವಾಮಿಯವರಿಗೆ ಮುಟ್ಟಿದ್ದು, ಕುಮಾರಸ್ವಾಮಿಯವರು ಜಿಲ್ಲಾಧ್ಯಕ್ಷರ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಮತ್ತು ಕೋಮುಲ್ ನಿರ್ದೇಶಕರ ಚುನಾವಣೆಗಳಲ್ಲಿ ಮುಳಬಾಗಿಲು ತಾಲ್ಲೂಕು ಹೊರೆತುಪಡಿಸಿದರೆ ಬೇರೆ ತಾಲ್ಲೂಕುಗಳಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತರು ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ವಿಫಲರಾಗಿರುವುದನ್ನು ಜೆಡಿಎಸ್ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಶಾಸಕ ಸಮೃದ್ದಿ ಮಂಜುನಾಥ್‌ರಿಗೆ ಬೆನ್ನೆಲುಬಾಗಿ ನಿಂತಿರುವ ಜೆಡಿಎಸ್ ಮುಖಂಡ ಆನಂದರೆಡ್ಡಿ ತಾಲ್ಲೂಕಿನ ಎಲ್ಲಾ ನಾಯಕರನ್ನು ಮತ್ತು ಮುಖಂಡರನ್ನು ಒಗ್ಗಟ್ಟಾಗಿ ಮುನ್ನಡೆಸುತ್ತಿರುವುದರಿಂದ ಮುಳಬಾಗಿಲು ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಸದೃಢವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂಬ ಮಾತು ಜೆಡಿಎಸ್ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.

ಜೆಡಿಎಸ್ ಮುಖಂಡ ಆನಂದರೆಡ್ಡಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ಆಪ್ತರಾಗಿದ್ದು, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದು ಪಕ್ಷ ಕಟ್ಟುವ ಚಾಣಾಕ್ಯತೆಯ ಅವರಲ್ಲಿರುವ ಕಾರಣ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅವರೇ ಸೂಕ್ತ ವ್ಯಕ್ತಿ ಎಂದು ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದ್ದು, ಈಗಾಗಲೇ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಮೌಖಿಕವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಕೋಟ್

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸದೃಢವಾಗಿದ್ದು, ಪಕ್ಷ ಮುನ್ನಡೆಸಲು ಸೂಕ್ತ ನಾಯಕತ್ವದ ಕೊರತೆಯಿದೆ. ಈಗಿನ ಜಿಲ್ಲಾಧ್ಯಕ್ಷರಾಗಿರುವ ವೆಂಕಟಶಿವಾರೆಡ್ಡಿಯವರು ಶ್ರೀನಿವಾಸಪುರ ಕ್ಷೇತ್ರದ ಶಾಸಕರಾಗಿದ್ದು, ಅವರಿಗೆ ವಯಸ್ಸೂ ಸಹ ಆಗಿದೆ. ಆದ್ದರಿಂದ ಮುಳಬಾಗಿಲು ತಾಲ್ಲೂಕಿನ ಶಾಸಕರಾದ ಸಮೃದ್ದಿ ಮಂಜುನಾಥ್ ಅಥವಾ ಆನಂದರೆಡ್ಡಿ ಅಥವಾ ಸಿ.ಎಂ.ಆರ್ ಶ್ರೀನಾಥ್ ಸೇರಿದಂತೆ ಸೂಕ್ತ ಅಭ್ಯರ್ಥಿಯನ್ನು ಜಿಲ್ಲಾ ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಕಟ್ಟಬಹುದು. ಹಾಗೂ ಮತ್ತೆ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಮರುಕಳಿಸುವಂತೆ ಮಾಡಬಹುದಾಗಿದೆ. ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

-ನಂಗಲಿ ಕಿಶೋರ್, ಜೆಡಿಎಸ್ ಯುವ ಮುಖಂಡ

ಚಿತ್ರ ೨೬ ಕೆ.ಎಲ್.ಆರ್. ೦೨ : ಜೆಡಿಎಸ್ ಪಕ್ಷದ ಚಿಹ್ನೆ

ಚಿತ್ರ ೨೬ ಕೆ.ಎಲ್.ಆರ್. ೦೨ಎ : ನಂಗಲಿ ಕಿಶೋರ್, ಜೆಡಿಎಸ್ ಯುವ ಮುಖಂಡ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net