ಜಿಲ್ಲೆಯ ಕಾಂಗ್ರೇಸ್ ಶಾಸಕರ ವೈಮನಸ್ಸು ಬೀದಿಗೆ / ಜಿಲ್ಲಾಡಳಿತ, ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತಿರುಗಿ ಬಿದ್ದಿರುವ ಇಬ್ಬರು ಕಾಂಗ್ರೇಸ್ ಶಾಸಕರು / ಕಾಂಗ್ರೇಸ್‌ನಲ್ಲಿ ಭಿನಮತ ಸ್ಪೋಟ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಚಿಮುಲ್‌ನಲ್ಲಿ ಅವ್ಯವಹಾರಗಳು ನಡೆದಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿ, ತನಿಖೆ ನಡೆಸಬೇಕೆಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಮ್ಮದೇ ಪಕ್ಷದ ಶಾಸಕರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತಿರುಗಿ ಬಿದ್ದಿರುವಾಗಲೇ ಕೆಜಿಎಫ್ ಶಾಸಕಿ ರೂಪಕಲಾ ರವರು ಸಹ ಜಿಲ್ಲಾಡಳಿತ ಮತ್ತು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುವ ಮೂಲಕ ಕಾಂಗ್ರೇಸ್ ಪಕ್ಷದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಪೋಟಿಸಿದಂತಾಗಿದೆ.

ಕೋಚಿಮುಲ್‌ನಲ್ಲಿ ಹಗರಣಗಳು ನಡೆದಿವೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಚಿಮುಲ್‌ನಲ್ಲಿ ಅಧ್ಯಕ್ಷರು ಮತ್ತು ನಿರ್ದೇಶರ ಆಡಳಿತ ಮಂಡಳಿ ಇರುವಲ್ಲಿ ಪ್ರಶ್ನಿಸದೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದ ನಂತರ ಕೋಚಿಮುಲ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ತನಿಖೆಗೆ ಒಳಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಪಡಿಸುತ್ತಿರುವಾಗಲೇ ಕೋಲಾರದಲ್ಲಿ ೨ ದಿನಗಳ ಕಾಲ ನಡೆದ ಜನಪರ ಉತ್ಸವಕ್ಕೆ ಆಹ್ವಾನಿಸಿಲ್ಲ ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ತಿರುಗಿಬಿದ್ದಾರೆ.

ಕೆಜಿಎಫ್ ಶಾಸಕಿ ರೂಪಕಲಾ ರವರು ರೈತರ ಸಂಸ್ಥೆಗಳಾದ ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕನ್ನು ಹಾಳು ಮಾಡುತ್ತಿದ್ದಾರೆಂದು ಹಾಗೂ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯದ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ೪ ಜನ ಕಾಂಗ್ರೇಸ್ ಶಾಸಕರು ಮತ್ತು ಇಬ್ಬರು ಎಂಎಲ್.ಸಿಗಳು ಇದ್ದು, ಇತ್ತೀಚೆಗೆ ನಡೆಯುತ್ತಿರುವ ಕಾರ್ಯಕ್ರಮಗಳಿಂದ ಎಸ್.ಎನ್.ನಾರಾಯಣಸ್ವಾಮಿ ಮತ್ತು ರೂಪಕಲಾ ರವರು ದೂರ ಉಳಿಯುತ್ತಿದ್ದು, ಕಾಂಗ್ರೇಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವಂತಾಗಿದೆ. ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು ಮೌನಕ್ಕೆ ಶರಣಾಗಿದ್ದಾರೆ. ಶಾಸಕರಾದ ಕೊತ್ತೂರು ಮಂಜುನಾಥ್, ನಂಜೇಗೌಡ, ಎಂ.ಎಲ್.ಸಿ.ಗಳಾದ ನಸೀರ್ ಅಹ್ಮದ್, ಅನಿಲ್‌ಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರ ಅಣತಿಯಂತೆ ಜಿಲ್ಲಾಡಳಿತ ನಡೆಯುತ್ತಿದೆ ಎಂದು ಎಸ್.ಎನ್.ನಾರಾಯಣಸ್ವಾಮಿ ಆರೋಪಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಯ ನಂತರ ಕಾಂಗ್ರೇಸ್ ಪಕ್ಷದಲ್ಲಿ ಮೌನವಾಗಿದ್ದ ಜನಪ್ರತಿನಿಧಿಗಳು ಇತ್ತೀಚೆಗೆ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಮೊದಲಿನಿಂದಲೂ ಜಿಲ್ಲೆಯ ಕಾಂಗ್ರೇಸ್ ಭಿನ್ನಮತ ಮತ್ತು ಒಳಜಗಳಗಳಿಂದ ದೂರ ಉಳಿದಿದ್ದ ಕೆಜಿಎಫ್ ಶಾಸಕಿ ರೂಪಕಲಾ ಪ್ರಥಮ ಬಾರಿಗೆ ಬುಧವಾರ ಮಾಧ್ಯಮಗಳೊಂದಿಗೆ ಜಿಲ್ಲಾಡಳಿತದ ವೈಫಲ್ಯಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇಷ್ಟಾದರೂ ಕಾಂಗ್ರೇಸ್ ಪಕ್ಷದ ಹೈಕಮ್ಯಾಂಡ್ ಆರೋಪಗಳಿಗೆ ಲಗಾಮು ಹಾಕಿಲ್ಲ.

ಜನಪರ ಉತ್ಸವಕ್ಕೆ ದಲಿತ ಶಾಸಕರ ಕಡೆಗಣನೆ :

ಕೋಲಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ದಲಿತರಿಗೆ ಮೀಸಲಿಗೆ ಎಸ್.ಸಿ ಎಸ್.ಟಿ ಅನುದಾನದಲ್ಲಿ ನಡೆದ ಜನಪರ ಉತ್ಸವದಲ್ಲಿ ಜಿಲ್ಲೆಯಲ್ಲಿ ಇರುವ ಮೂವರು ದಲಿತ ಶಾಸಕರು ಗೈರು ಹಾಜರಾಗಿದ್ದು, ಇದಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿಯೇ ಕಾರಣ ಎಂದು ಎಸ್.ಎನ್. ಮತ್ತು ರೂಪಕಲಾ ಆರೋಪ ಮಾಡಿದ್ದಾರೆ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಜನಪರ ಉತ್ಸವದ ಬಗ್ಗೆ ಯಾವುದೇ ಚಕಾರ ಎತ್ತದೆ ಪರೋಕ್ಷವಾಗಿ ಜಿಲ್ಲಾಡಳಿತ ವಿರುದ್ಧ ಮನಸ್ಸು ಹೊರ ಹಾಕಿದ್ದಾರೆ. ಜನಪರ ಉತ್ಸವದ ಬಗ್ಗೆ ದಲಿತ ಮುಖಂಡರೇ ಅಪಸ್ವರ ಎತ್ತಿ, ದುಡ್ಡು ಹೊಡೆಯುವ ಉತ್ಸವ ಇದಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ.

ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸದ ಜಿಲ್ಲಾ ಉಸ್ತುವಾರಿ ಸಚಿವರು :

ಈ ಹಿಂದೆ ಕೋಲಾರದ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ ರಾಮಲಿಂಗಾರೆಡ್ಡಿ ರಮೇಶ್‌ಕುಮಾರ್ ರವರು ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಶಾಸಕರನ್ನು ಕರೆದು ಬಜೆಟ್‌ನಲ್ಲಿ ಏನು ಮಾಡಬೇಕು. ಹೊಸ ಹೊಸ ಯೋಜನೆಗಳ ಬಗ್ಗೆ ಶಾಸಕರಿಂದ ಪ್ರಸ್ತಾವನೆಗಳನ್ನು ಪಡೆದು ಸರ್ಕಾರಕ್ಕೆ ಕೊಡುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರು ಸೌಜನ್ಯಕ್ಕಾದರೂ ಫೋನ್ ಮಾಡಿಲ್ಲ. ಸಭೆ ಕರೆದಿಲ್ಲ. ಏನು ಮಾಡಬೇಕೆಂದು ಕೇಳಲಿಲ್ಲ. ತೊಗಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಎಸ್.ಎನ್. ವಾಗ್ದಾಳಿ ನಡೆಸಿದ್ದಾರೆ. ಕೆಜಿಎಫ್. ಶಾಸಕಿ ರೂಪಕಲಾ ರವರು ಸಹ ಇದನ್ನೇ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿತ್ರ ೨೬ ಕೆ.ಎಲ್.ಆರ್. ೦೩ : ಬೈರತಿ ಸುರೇಶ್ ರವರ ಭಾವಚಿತ್ರ

ಚಿತ್ರ ೨೬ ಕೆ.ಎಲ್.ಆರ್. ೦೩ಎ : ರೂಪಕಲಾ ಶಶಿಧರ್ ರವರ ಭಾವಚಿತ್ರ

ಚಿತ್ರ ೨೬ ಕೆ.ಎಲ್.ಆರ್. ೦೩ಬಿ : ಎಸ್.ಎನ್.ನಾರಾಯಣಸ್ವಾಮಿ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net