ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಸಂಜನಾ

SANJANA
Published on

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಬಂಧನಕ್ಕೊಳಗಾಗಿರುವ ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಎನ್‌ಡಿಪಿಎಸ್ ವಿಶೇಷ ಕೋರ್ಟ್ ಸೆ.28ರಂದು ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಜನಾ ಹೈಕೋರ್ಟ್ ಮೊರೆ ಹೋಗಿದ್ದು, ಅರ್ಜಿಯಲ್ಲಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಹಾಗೂ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಠಾಣೆ ಪೊಲೀಸರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಅರ್ಜಿಯಲ್ಲೇನಿದೆ?: ಡ್ರಗ್ಸ್ ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಾಡಲಾಗಿರುವ ಯಾವುದೇ ಆರೋಪಕ್ಕೆ ಸಾಕ್ಷ್ಯಾಧಾರ ಹಾಗೂ ದಾಖಲೆ ಇಲ್ಲ. ದೂರುದಾರ ಸಲ್ಲಿಸಿರುವ ಸ್ವಯಂಪ್ರೇರಿತ ವರದಿಯಲ್ಲಿ ತಮ್ಮ ಹೆಸರು ಇಲ್ಲ. ತಪಾಸಣೆ ವೇಳೆ ತಮ್ಮ ಮನೆಯಲ್ಲಿ ಯಾವುದೇ ಮಾದಕ ಪದಾರ್ಥಗಳು ಸಿಕ್ಕಿಲ್ಲ. ವಶಪಡಿಸಿಕೊಳ್ಳಲಾದ ವಸ್ತುಗಳಿಂದ ಡ್ರಗ್ಸ್ ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಅಥವಾ ಡ್ರಗ್ಸ್ ಸೇವಿಸಿದ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಆದರೂ ತಮ್ಮನ್ನು ಪೊಲೀಸರು ಬಂಧಿಸಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸಿಸಿಬಿ ಎಸಿಪಿ ಕೆ.ಸಿ. ಗೌತಮ್ ಅವರ ದೂರು ಆಧರಿಸಿ ಸಿದ್ಧಪಡಿಸಲಾದ ವರದಿಯ ಮಾಹಿತಿಯು ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 41(2) ಅಥವಾ 42(1) ವ್ಯಾಪ್ತಿಗೆ ಒಳಪಡುವುದಿಲ್ಲ. ಸಿಸಿಬಿ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರವಿಲ್ಲ. ಪೊಲೀಸ್ ವಶದಲ್ಲಿದ್ದ ಅವಧಿಯಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಪೊಲೀಸ್ ವಿಚಾರಣೆ ಪೂರ್ಣಗೊಂಡಿದ್ದರೂ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಲ್ಲ. ಆದ್ದರಿಂದ, ಜಾಮೀನು ಮಂಜೂರು ಮಾಡಬೇಕು ಎಂದು ಸಂಜನಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net