

ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ಸರ್ವ ಧರ್ಮಗಳ ಸಮುದಾಯದವರೆಲ್ಲ ಒಗ್ಗೂಡಿ ಜಾತ್ರೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದರಿಂದ ಸೌಹಾರ್ದ ಭಾವನೆ ವೃದ್ಧಿಸುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಹೋಬಳಿ ಬಾಡದಬೈಲು ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ 7ನೇ ದಿನ ನಿಮಿತ್ತ ಮಧು ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಸಾಂಪ್ರದಾಯ ಹಾಗೂ ಆಚರಣೆಗಳಿಂದ ಯುವಜನತೆಯಲ್ಲಿ ನಂಬಿಕೆಗಳು ಉಳಿಯುತ್ತವೆ. ಗ್ರಾಮಗಳಲ್ಲಿ ಜಾತ್ರೆಗಳಿಂದ ಜನರಲ್ಲಿ ಧಾರ್ಮಿಕ ಮನೋಭಾವನೆ ಮೂಡುತ್ತದೆ. ಬಾಡದಬೈಲು ಗ್ರಾಮದಲ್ಲಿ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಶ್ರೀದೇವಿ ಭಕ್ತರಿಗೆ ಸುಖ, ಶಾಂತಿ ನೆಮ್ಮದಿ ಆರೋಗ್ಯ ಕರುಣಿಸಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಆಲಳ್ಳಿಮಠದ ವೈದಿಕ ವಿಚಾರಣಾ ಶಾಸ್ತ್ರೀಗಳಾದ ಪುಟ್ಟಯ್ಯ ಮಾತನಾಡಿ, ಧಾರ್ಮಿಕ ಆಚಾರ ವಿಚಾರಗಳು ಹಾಗೂ ದೇವರ ಜಾತ್ರೆ ಮಹೋತ್ಸವದ ಧಾರ್ಮಿಕ ಆಚರಣೆಯ ಮಹತ್ವ ತಿಳಿಸಿದರು.
ಪಿಡಿಒ ನಾರಾಯಣಮೂರ್ತಿ, ಪೊಲೀಸ್ ಆರಕ್ಷಕರಾದ ಎಂ.ಬಿ.ನಾಗರಾಜ್, ಪ್ರದೀಪ್, ಲೈನ್‌ಮನ್ ಬಸವರಾಜ್, ಗೋಪಾಲಮೂರ್ತಿ, ಪಿ.ಎಚ್.ಸಿ.ಒ ಉಷಾ ಮಹಾದೇವ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರದೀಪ್ ಗೌಡ, ಗ್ರಾಪಂ ಉಪಾಧ್ಯಕ್ಷ ಎಂ.ಬಿ.ರೇಣುಕಪ್ರಸಾದ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಗುರುಕುಮಾರ್ ಪಾಟೀಲ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ವಿ.ಗೌಡ, ಗ್ರಾಪಂ ಸದಸ್ಯ ತಿರುಪತಿ, ಎಂ.ಪಿ.ರತ್ನಾಕರ್, ಸೊರಬ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಭು ಸಾಹುಕಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಕೆಎಂಎ್ ನಿರ್ದೇಶಕ ದಯಾನಂದ, ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಯಪ್ಪ, ಅರುಣ್ ಗೌಡ ಇದ್ದರು.