ಜಲಜೀವನ್ ಮಿಷನ್ ಯೋಜನೆ ಚುರುಕಾಗಲಿ

CTD MP DISHA BANK MEETING
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಜಲ ಜೀವನ ಮಿಷನ್ ಯೋಜನೆ(ಜೆಜೆಎಂ) ತ್ವರಿತಗೊಳಿಸುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂದಲ್ಲಿ ಗುರುವಾರ ದಿಶಾ ಸಭೆಯಲ್ಲಿ ಮಾತನಾಡಿ, ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಜಿಲ್ಲೆಗೆ ಮಂಜೂರಾಗಿರುವ ಅಂದಾಜು 4 ಸಾವಿರ ಕೋಟಿ ರೂ. ಸದ್ಬಳಕೆ ಆಗಬೇಕು. ಕೆಲಸ ಸರಿಯಾಗಿ ಮಾಡದ ಗುತ್ತಿಗೆದಾರರನ್ನು ಬದಲಾಯಿಸಬೇಕು ಎಂದರು.

ಜೆಜೆಎಂನಿಂದಾಗಿ ಹಳ್ಳಿಗಳಲ್ಲಿ ಹೊಸ ಚರಂಡಿ ನಿರ್ಮಾಣ ಆಗಿದೆ. ಕಾಮಗಾರಿ ಸಮರ್ಪಕವಾಗಿಲ್ಲ. ಈ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಸಮಾಧಾನ ವ್ಯಕ್ತಪಡಿಸಿದರು. ಗುಣಮಟ್ಟದ ಕಾಮಗಾರಿಗಾಗಿ ಪ್ರತಿ ತಾಲೂಕಲ್ಲಿ ಗುತ್ತಿಗೆದಾರರ ಸಭೆಗೆ ಎಂಎಲ್‌ಸಿ ಕೆ.ಎಸ್.ನವೀನ್ ಸೂಚಿಸಿದರು.

ಜಿಲ್ಲೆಯ 6 ತಾಲೂಕಿನಲ್ಲಿ ಬ್ಯಾಚ್ 1, 2, 3 ಮತ್ತು 4ರಲ್ಲಿ 1568 ಕಾಮಗಾರಿಗಳ ಪೈಕಿ 685 ಕಾಮಗಾರಿಗಳು ಪೂರ್ಣಗೊಂಡಿವೆ. 798 ಪ್ರಗತಿಯಲ್ಲಿದ್ದು, ಉಳಿದವುಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದೆಂದು ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಮೇಟಿ ಪಾಟೀಲ್ ಹೇಳಿದರು.

ಜಿಲ್ಲೆ ಎಲ್ಲ ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರಿನ ಮೂಲದ ಮೂಲಕ ಸುರಕ್ಷಿತ ನೀರು ಪೂರೈಸಲು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 11 ಯೋಜನೆಗಳು ಅನುಮೋದನೆಗೊಂಡಿದ್ದು, 2 ಪೂರ್ಣಗೊಂಡಿವೆ. 2 ಮುಕ್ತಾಯದ ಹಂತದಲ್ಲಿದ್ದು, 7 ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಬೇಸಿಗೆ ಬೆಳೆಗಾಗಿ ಜಿಲ್ಲೆಗೆ ಹೆಚ್ಚಿನ ವಿದ್ಯುತ್ ಹಂಚಿಕೆಯ ಪ್ರಸ್ತಾವನೆ ಸಲ್ಲಿಸಬೇಕು. ಬೇಸಿಗೆಯಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆ ಆಗಬಾರದೆಂದರು. ತಜ್ಞ ವೈದ್ಯರ ನೇಮಕಕ್ಕೆ ಅರ್ಜಿ ಆಹ್ವಾನಿಸುವಂತೆ ಡಿಎಚ್‌ಒ ಡಾ.ರೇಣುಪ್ರಸಾದ್‌ಗೆ ನಿರ್ದೇಶಿಸಿದರು.

ಪ್ರಸಕ್ತ ಸಾಲಿನ ವಿವಿಧ ಇಲಾಖೆಗಳ ಕಾಮಗಾರಿಗಳನ್ನು 2025 ಮಾರ್ಚ್ 31ರೊಳಗೆ ಪೂರ್ಣಗೊಳಿಸಬೇಕೆಂದರು. ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದವರು ಕೂಡಲೇ ಸ್ಪಂದಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-4ನೇ ಹಂತ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ಅರ್ಹ ಗ್ರಾಮಗಳ ಪಟ್ಟಿಯೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net