

ಕಳೆದ ಒಂದೂವರೆ ತಿಂಗಳಲ್ಲಿ ಮೂರನೇ ಬಾರಿ ಜಮ್ಮು-ಕಾಶ್ಮೀರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉಧಮಪುರ್ ಹಾಗೂ ರಾಜಸ್ಥಾನದ ಬಾಲ್ಮೇರ್ನಲ್ಲಿ ಚುನಾವಣೆ ರ‍್ಯಾಲಿ ನಡೆಸಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸತ್ಯವನ್ನು ಪ್ರತಿಪಕ್ಷಗಳು ಅರಿತಿವೆ, ಇದು ಪಕ್ಷದ ಚುನಾವಣೆಯಲ್ಲ, ದೇಶದ ಚುನಾವಣೆ ಎಂದರು.
ಉಧಮಪುರ್: ಕಳೆದ ಹತ್ತು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಸಂಪೂರ್ಣ ಬದಲಾಗಿದ್ದು, ನೈರಾಶ್ಯದಿಂದ ಆಶಾವಾದದತ್ತ ಹೊರಳಿದೆ. ಜಮ್ಮು-ಕಾಶ್ಮೀರದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದೇ ಮೊದಲ ಬಾರಿ ಉಗ್ರರ ಭಯ, ಗಡಿಯಾಚೆಗಿನ ಗುಂಡಿನ ಚಕಮಕಿ ಹಾಗೂ ಪ್ರತ್ಯೇಕತಾವಾದಿಗಳ ಭಯವಿಲ್ಲದೆ ಚುನಾವಣೆ ನಡೆಯಲಿದೆ. ರಸ್ತೆ, ವಿದ್ಯುತ್, ನೀರು, ಸುರಕ್ಷತೆಯನ್ನು ಕಲ್ಪಿಸಲಾಗಿದೆ. ಇದಕ್ಕಿಂತ ಮಿಗಿಲಾಗಿ ಜಮ್ಮು-ಕಾಶ್ಮೀರದ ಮನಸ್ಸು ಬದಲಾಗಿದ್ದು, ಅದು ಈಗ ವಿಶ್ವಾಸದಿಂದ ತುಂಬಿದೆ. ಕಳೆದ ಹತ್ತು ವರ್ಷಗಳಲ್ಲಿ ಭಯೋತ್ಪಾದಕರು ಮತ್ತು ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಈ ಪ್ರದೇಶ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದರು. ‘ವಿಕಸಿತ ಭಾರತಕ್ಕಾಗಿ ವಿಕಸಿತ ಜಮ್ಮು-ಕಾಶ್ಮೀರ ಇದು ಮೋದಿ ಗ್ಯಾರಂಟಿ. ಆದರೆ, ಕಾಂಗ್ರೆಸ್ ಮತ್ತು ಪಿಡಿಪಿ ಜಮ್ಮು-ಕಾಶ್ಮೀರವನ್ನು ಮತ್ತೆ ಹಿಂದಿನ ದಿನಗಳಿಗೆ ಕೊಂಡೊಯ್ಯಲು ಬಯಸುತ್ತಿವೆ. ಈ ಪಕ್ಷಗಳು ಜಮ್ಮು-ಕಾಶ್ಮೀರಕ್ಕೆ ಭಾರಿ ಹಾನಿ ಮಾಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಜನತಾ ದಳ ನಾಯಕ, ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಇತ್ತೀಚೆಗೆ ಮೀನು ತಿನ್ನುವ ವಿಡಿಯೋ ಹಂಚಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ತೇಜಸ್ವಿ ಅಥವಾ ಲಾಲು ಪರಿವಾರದ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇವರು ಚೈತ್ರ ನವರಾತ್ರಿ ಸಮಯದಲ್ಲಿ ಮಾಂಸ ತಿನ್ನುವ ವಿಡಿಯೋ ಬಿಡುಗಡೆ ಮಾಡಿ, ಮೊಗಲ್ ಮಾನಸಿಕತೆ ಪ್ರದರ್ಶಿಸುತ್ತಿದ್ದಾರೆ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಜನರು ಅವರಿಗೆ ಬೇಕಾದ ಆಹಾರವನ್ನು ಸ್ವೀಕರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ, ಜನರ ಭಾವನೆಗಳಿಗೆ ಘಾಸಿ ಮಾಡಲೆಂದೆ ನವರಾತ್ರಿ ಸಮಯದಲ್ಲಿ ಮಾಂಸಾಹಾರ ಸೇವನೆಯ ವಿಡಿಯೋ ಹರಿಬಿಟ್ಟಿದ್ದು, ಕುತ್ಸಿತ ಮಾನಸಿಕತೆಗೆ ಸಾಕ್ಷಿ ಎಂದರು. 2023ರ ಸೆಪ್ಟೆಂಬರ್ 2ರಂದು (ಶ್ರಾವಣಮಾಸ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮನೆಯಲ್ಲಿ ಮಟನ್ ತಯಾರಿಸುವುದನ್ನು ಕಲಿತು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಸಂವಿಧಾನ ಅಪಾಯದಲ್ಲಿ ಆರೋಪಕ್ಕೆ ಟಕ್ಕರ್: ‘ಬಾಬಾಸಾಹೇಬರು ರಚಿಸಿದ ಸಂವಿಧಾನ ಬಿಜೆಪಿಯಿಂದ ಅಪಾಯದಲ್ಲಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರದ ಅವಧಿಯಲ್ಲೇ ಮೊದಲ ಬಾರಿ ಸಂವಿಧಾನ ದಿನದ ಆಚರಣೆ ಆರಂಭವಾಯಿತು. ಬಾಬಾಸಾಹೇಬರಿಗೆ ಸಂಬಂಧಿಸಿದ ಪಂಚತೀರ್ಥಗಳನ್ನು ಅಭಿವೃದ್ಧಿಗೊಳಿಸಲಾಯಿತು. ಸಂವಿಧಾನ ನಮ್ಮ ಪಾಲಿಗೆ ಭಗವದ್ಗೀತೆ, ರಾಮಾಯಣ, ಕುರಾನ್ ಹಾಗೂ ಬೈಬಲ್ ಆಗಿದೆ. ಬಾಬಾಸಾಹೇಬ್ ಮತ್ತು ಸಂವಿಧಾನವನ್ನು ಅವಮಾನಿಸುವ ಕಾಂಗ್ರೆಸ್ ಮತ್ತು ಐಎನ್ಡಿಐಎ ಒಕ್ಕೂಟದ ಸುಳ್ಳುಗಳಿಂದ ಎಚ್ಚರವಾಗಿರಿ. ಈಗಿನ ಸ್ಥಿತಿಯಲ್ಲಿ ಅಂಬೇಡ್ಕರ್ ಬಂದರೂ ಸಂವಿಧಾನವನ್ನು ಮುಗಿಸಲು ಆಗದು ಎಂದರು.
ಶ್ರೀರಾಮ ಕಾಲ್ಪನಿಕ ಎಂದು ಹೇಳಿದ್ದು ಯಾರನ್ನು ಖುಷಿ ಪಡಿಸಲು? : ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ನಾಯಕರು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಕೋಟ್ಯಂತರ ಜನರ ಆರಾಧ್ಯದೈವ ಶ್ರೀರಾಮಚಂದ್ರ ಸಣ್ಣ ಟೆಂಟಿನಲ್ಲಿ ನೆಲೆಸಿದ್ದ. ಈ ಟೆಂಟ್ ಬದಲಿಸುವ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ನಾಯಕರು ಮುಖ ತಿರುಗಿಸುತ್ತಿದ್ದರು. ಶ್ರೀರಾಮನ ಟೆಂಟ್ ಬದಲಿಸಬೇಕಾದರೆ ನ್ಯಾಯಾಲಯಗಳಿಗೆ ಎಡತಾಕಬೇಕಾಗುತ್ತಿತ್ತು. ಇದು ಕೋಟ್ಯಂತರ ರಾಮಭಕ್ತರ ಶ್ರದ್ಧೆಯ ಮೇಲಾದ ಆಘಾತವಾಗಿತ್ತು. ಕಾಂಗ್ರೆಸ್ ಭಗವಾನ್ ಶ್ರೀರಾಮಚಂದ್ರನನ್ನು ಕಾಲ್ಪನಿಕ ಎಂದು ಹೇಳಿದ್ದು ಯಾರನ್ನು ಖುಷಿ ಪಡಿಸಲು? ಶ್ರೀರಾಮ ಮಂದಿರವನ್ನು ಬಿಜೆಪಿ ಚುನಾವಣಾ ವಿಷಯವಾಗಿಸುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಶ್ರೀರಾಮ ಮಂದಿರ ನಿರ್ವಣಕ್ಕಾಗಿ 500 ವರ್ಷಗಳಿಂದ ಸಂಘರ್ಷ ನಡೆದುಕೊಂಡು ಬಂದಿದೆ, ಆಗ ಬಿಜೆಪಿ, ಇನ್ನೂ ಹುಟ್ಟಿರಲಿಲ್ಲ. ಹಿಂದೆಯೂ, ರಾಮ ಮಂದಿರ ಚುನಾವಣೆಯ ವಿಷಯವಾಗಿರಲಿಲ್ಲ, ಮುಂದೆಯೂ ಇರುವುದಿಲ್ಲ ಎಂದರು.
ಬಾರ್ವೆರ್ (ರಾಜಸ್ಥಾನ): ಕಾಂಗ್ರೆಸ್ ಯಾವಾಗಲೂ ದೇಶವಿರೋಧಿ ಶಕ್ತಿಗಳ ಜತೆಗೆ ಇರುತ್ತದೆ. ಆರು ದಶಕಗಳ ಕಾಲ ಅಧಿಕಾರದಲ್ಲಿದ್ದರೂ ದೇಶದ ಯಾವುದೇ ಸಮಸ್ಯೆಗೆ ಪೂರ್ಣ ಪರಿಹಾರ ಒದಗಿಸಲಿಲ್ಲ. ಅಲ್ಲದೆ, ಅದರ ಚಿಂತನೆಯೇ ಅಭಿವೃದ್ಧಿ ವಿರೋಧಿಯಾಗಿದೆ. ಐಎನ್ಡಿಐಎ ಒಕ್ಕೂಟ ದೇಶವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶುಕ್ರವಾರ ಬಾರ್ವೆರ್ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಮಹಿಳೆಯರು ಕಳೆದ 70 ವರ್ಷಗಳಿಂದ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ, ಅವರ ಸಂಕಷ್ಟವನ್ನು ಯಾರೂ ಆಲಿಸಲಿಲ್ಲ. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ಜಲಜೀವನ್ ಮಿಷನ್ ಮುಖಾಂತರ ರಾಜ್ಯದ 50 ಲಕ್ಷ ಮನೆಗಳಿಗೆ ನೀರು ಒದಗಿಸಲಾಗಿದೆ. ಹಾಗಾಗಿಯೇ ಇಡೀ ದೇಶ, ‘ನಾಲ್ಕು ಜೂನ್ರಂದು 400ಕ್ಕೂ ಅಧಿಕ ಸ್ಥಾನ’ ಎಂದು ಹೇಳುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.