

ಎನ್.ಆರ್.ಪುರ: ಪಟ್ಟಣದ ಪೌರ ಕಾರ್ಮಿಕರ ಬೀದಿಯ ಪ.ಜಾತಿಯ ಆರು ಕುಟುಂಬದವರಿಗೆ ಬಾಳೆ ಗ್ರಾಮದ ಸರ್ವೇ ನಂ.19ರಲ್ಲಿ ಮಂಜೂರಾಗಿದ್ದ 12 ಎಕರೆ ಜಮೀನಿಗೆ ಖಾತೆ, ಪಹಣಿ ಹಾಕಿಸಿ ಸರ್ವೇ ಮಾಡಿ ಕಲ್ಲುಬಾಂದು ಹಾಕಿಸಿ ಜಮೀನನ್ನು ನಮ್ಮ ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ ಆರು ಕುಟುಂಬದವರು ಹಾಗೂ ದಲಿತ ಸಂಘಷರ್ ಸಮಿತಿ ಮುಖಂಡರು ಶನಿವಾರ ತಹಸೀಲ್ದಾರ್ ಡಾ.ನೂರುಲ್‌ಹುದಾ ಅವರಿಗೆ ಮನವಿ ಸಲ್ಲಿಸಿದರು.
ಕಸಬಾ ಹೋಬಳಿ ಬಾಳೆಕೊಪ್ಪದ ಸರ್ವೇ ನಂ.19ರಲ್ಲಿ 1984-85ರಲ್ಲಿ ದರಕಾಸ್ತು ಮೂಲಕ ತಲಾ 2 ಎಕರೆಯಂತೆ ಒಟ್ಟು 12 ಎಕರೆ ಮಂಜೂರಾಗಿದೆ. ಮಂಜೂರಾದ ಅವಧಿಯಿಂದ ಇಲ್ಲಿಯವರೆಗೂ ಖಾತೆ, ಪಹಣಿ ಹಾಗೂ ಚೆಕ್‌ಬಂಧಿ, ಕಲ್ಲುಬಾಂದು ಹಾಕಿಲ್ಲ. ಮರ ಮಾಲ್ಕಿ ಮಾಡಿಲ್ಲ. ಈ ಜಮೀನು ಪರಿಶಿಷ್ಟ ಜಾತಿಯವರಿಗೆ ಮಂಜೂರು ಮಾಡಲಾಗಿದೆ. ಆದರೆ ಕೆಲವರು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಪ.ಜಾತಿಗೆ ಮಂಜೂರಾದ ಜಮೀನನ್ನು ಬೇರೆಯವರಿಗೆ ಮತ್ತೆ ಮಂಜೂರು ಮಾಡಿದರೆ ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಈ ಕಾಯ್ದೆ ಉಲ್ಲಂಘನೆ ಮಾಡಿದರೆ ಅಧಿಕಾರಿಗಳು, ನೌಕರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಒತ್ತುವರಿ ಮಾಡಿದ ಜಮೀನನ್ನು ಖುಲ್ಲಾಪಡಿಸಿ ಪ.ಜಾತಿಯವರಿಗೆ 12 ಎಕರೆ ಜಮೀನನ್ನು ನೀಡಬೇಕು. ಇಲ್ಲದಿದ್ದಲ್ಲಿ ಅ.15ರ ನಂತರ ಆಮರಣಾಂತ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ದಲಿತ ಸಂಘರ್ಷ ಸಮಿತಿ ಮುಖಂಡರಾದ ತರೀಕೆರೆ ವೆಂಕಟೇಶ್, ಎನ್.ಆರ್.ಪುರದ ರಾಜೇಶ್, ರೆಹಮಾನ್, ಬಾಳೆಹೊನ್ನೂರು ಭವಾನಿ ಮತ್ತಿತರರಿದ್ದರು